ನಿಡಗುಂದಿ: ಮನುಷ್ಯನಿಗೆ ಎಷ್ಟೇ ಹಣ, ಐಶ್ವರ್ಯ, ಆಸ್ತಿ-ಅಂತಸ್ತು ಇದ್ದರೂ ನೆಮ್ಮದಿಯೇ ಇರುವುದಿಲ್ಲ. ದೇವರು ನೀಡಿದಾಗ ಸ್ವಲ್ಪವಾದದೂ ದೇವರಿಗೆ ಅರ್ಪಿಸಿದರೆ ನೆಮ್ಮದಿ ಸಿಗುತ್ತದೆ ಎಂದು ಜವಳಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಿಡಗುಂದಿಯ ಯಲಗೂರ ಕ್ರಾಸ್‌ಬಳಿ ದಿ.ಮಾತೋಶ್ರೀ ನೀಲಮ್ಮ ಗುರುಸಿದ್ಧಪ್ಪ ನಾಗಠಾಣ ಅವರ ಸ್ಮರಣಾರ್ಥ ಅವರ ಪುತ್ರ ಸಿದ್ಧಣ್ಣ ನಾಗಠಾಣ ಅವರು 26 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ವೀರಭದ್ರೇಶ್ವರ ಮಹಾದ್ವಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರತನ್ ಟಾಟಾ ಅವರು 11 ಲಕ್ಷ ಕೋಟಿ ರೂ. ಆಸ್ತಿ ಒಡೆಯರಿದ್ದರೂ 8 ಲಕ್ಷ ಕೋಟಿ ರೂ. ಆಸ್ತಿ ಸಾರ್ವಜನಿಕರ ಹೆಸರಿನಲ್ಲಿದೆ. ಜೀವನದಲ್ಲಿ ನಾವು ಮಾಡುವ ಧಾರ್ಮಿಕ ಕಾರ್ಯದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ತಂದೆಯ ಸ್ಮರಣಾರ್ಥ ಕಲ್ಯಾಣ ಮಂಟಪ, ತಾಯಿ ಸ್ಮರಣಾರ್ಥ ಮಹಾದ್ವಾರ ನಿರ್ಮಿಸಿದ ಜಿವಿವಿಎಸ್ ಸಮೂಹ ಸಂಸ್ಥೆಗಳ ಚೇರ್ಮನ್ ಸಿದ್ಧಣ್ಣ ನಾಗಠಾಣ ಕಾರ್ಯ ಇತರರಿಗೆ ಮಾದರಿಯಾಗಿದೆ. ದೇವಸ್ಥಾನದಲ್ಲಿ ನಿರಂತರ ದಾಸೋಹಕ್ಕೆ ದೇಣಿಗೆ ನೀಡಲು ಮುಂದಾದ ರೇಶ್ಮಿ ಕುಟುಂಬದ ಕಾರ್ಯವೂ ಮೆಚ್ಚುವಂಥದ್ದು ಎಂದರು.
ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ದೇವಸ್ಥಾನಕ್ಕೆ ಅಪಾರ ಭಕ್ತರು ವಿವಿಧ ಭಕ್ತಿ ಕಾಣಿಕೆ ಸಲ್ಲಿಸುತ್ತಿರುವುದು ಮಾದರಿ ಕಾರ್ಯವಾಗಿದೆ. ದೇವಸ್ಥಾನದಲ್ಲಿ ಬೆಳ್ಳಿ ನಂದಿ ಮೂರ್ತಿ, ಬೆಳ್ಳಿ ಬಾಗಿಲು ಸೇರಿದಂತೆ ವಿವಿಧ ಕಾರ್ಯಗಳಿಂದ ದೇವಸ್ಥಾನ ಜೀರ್ಣೋದ್ಧಾರ ಕೈಗೊಳ್ಳುತ್ತಿರುವ ಭಕ್ತರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಜೆಡಿಎಸ್ ಧುರೀಣ ಸೋಮನಗೌಡ ಪಾಟೀಲ ಮನಗೂಳಿ ಮಾತನಾಡಿ, ದೇವರ ಮೇಲೆ ಭಕ್ತರು ತೋರಿಸುತ್ತಿರುವ ಭಕ್ತಿ ಅಪಾರವಾಗಿದೆ. ಸಿದ್ಧಣ್ಣ ನಾಗಠಾಣ ಮನೆತನ, ತಂದೆ, ತಾಯಿ ಹೆಸರಲ್ಲಿ ಮಾಡುತ್ತಿರುವ ಭಕ್ತಿಯ ಕಾರ್ಯ ಮಾದರಿಯಾಗಿದೆ ಎಂದರು.
ರುದ್ರೇಶ್ವರ ಸಂಸ್ಥಾನ ಮಠದ ರುದ್ರಮುನಿ ಶ್ರೀಗಳು, ಹಿರೇಮಠದ ವೀರ ರುದ್ರಮನಿ ಶ್ರೀಗಳು, ನಾಗಠಾಣ ಚನ್ನಮಲ್ಲಿಕಾರ್ಜುನ ಶ್ರೀಗಳು ಆಶೀರ್ವಚನ ನೀಡಿದರು.
ದೇವಸ್ಥಾನ ಕಮಿಟಿ ಅಧ್ಯಕ್ಷ ವಿಶ್ವನಾಥ ಶೆಟ್ಟರ, ಮಲ್ಲಪ್ಪ ಅರಬ್ಬಿ, ಅನುಪ್ ರೇಶ್ಮಿ, ದೇವಸ್ಥಾನ ಕಮಿಟಿ ಪದಾಧಿಕಾರಿಗಳು ಕಮಿಟಿ ಸದಸ್ಯರು, ಭಕ್ತರು ಇದ್ದರು.