ವಿಜಯಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ‘ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿ’ ನೇತೃತ್ವದಲ್ಲಿ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಬೆಂಬಲ ಸೂಚಿಸಿದರು. ಅನೀಲ ಹೊಸಮನಿ, ಶ್ರೀನಾಥ ಪೂಜಾರಿ, ಅರವಿಂದ ಕುಲಕರ್ಣಿ, ಮಲ್ಲಿಕಾರ್ಜುನ ಬಟಗಿ ಮತ್ತಿತರರಿದ್ದಾರೆ.  
ಜಿಲ್ಲೆ

ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟಕ್ಕೆ ಬೆಂಬಲ, ಎದುರಾಳಿಗಳಿಗೆ ತೀಕ್ಷ್ಣವಾಗಿ ತಿರುಗೇಟು, ಪಿಪಿಪಿ ಮಾದರಿಯಿಂದ ಜನಸಾಮಾನ್ಯರ ಸುಲಿಗೆ ಎಂದ ಸಚಿವ ಶಿವಾನಂದ ಪಾಟೀಲ

ವಿಜಯಪುರ: ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ)ದ ಮಾದರಿ ಕೈ ಬಿಟ್ಟು ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ಒತ್ತಾಯಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಬೆಂಬಲ ವ್ಯಕ್ತಪಡಿಸಿದರು.

ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ‘ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿ’ ನೇತೃತ್ವದಲ್ಲಿ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಸಂಪೂರ್ಣ ಬೆಂಬಲ ಸೂಚಿಸಿದ ಅವರು, ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕೆಂಬುದು ನನ್ನ ಒತ್ತಾಯವೂ ಆಗಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರಿಗೂ ಮನವರಿಕೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಆಲಮಟ್ಟಿಯಲ್ಲಿ ಬಾಗಿನ ಅರ್ಪಿಸಲು ಬಂದಿದ್ದ ಸಿಎಂ ಮತ್ತು ಡಿಸಿಎಂ ಅವರು ಆವೇಶದಲ್ಲಿ ಏನೋ ಮಾತನಾಡಿದರು. ಆಗ ಅವರಿಗೆ ಮನವರಿಕೆ ಮಾಡಿಕೊಡಲಾಗಲಿಲ್ಲ. ಬರುವ ದಿನಗಳಲ್ಲಿ ಸಿಎಂ ಮತ್ತು ಡಿಸಿಎಂಗೆ ಮನವರಿಕೆ ಮಾಡುವ ಮೂಲಕ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಆರೋಗ್ಯ ಸಚಿವರಾಗಿ ಕೊಡುಗೆ

ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆರೋಗ್ಯ ಸಚಿವನಾಗಿದ್ದಾಗ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜ್ ಮಂಜೂರಿಸಿದ್ದೆ. 2013-18ರ ಅವಧಿಯಲ್ಲೂ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡಲಾಗಿ ಅವರೇ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸುವ ಭರವಸೆ ನೀಡಿದ್ದರು. ಅಲ್ಲದೇ, ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಬೇಕಾದ ಎಲ್ಲ ಮೂಲ ಸೌಕರ್ಯಗಳನ್ನೂ ಕಲ್ಪಿಸಲಾಗಿತ್ತು. ಟ್ರಾಮಾ ಚೆಂಟ್, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, 150 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರ, ಆಯುಷ್ ಆಸ್ಪತ್ರೆ, ಸುಂದರ ಉದ್ಯಾನ, ತಾಜ್‌ಬಾವಡಿಯಿಂದ ನೀರಿನ ಸೌಲಭ್ಯ, ಬಿಎಸ್‌ಸಿ ನಸಿಂಗ್ ಕಾಲೇಜ್, ಡಿಪ್ಲೊಮಾ ನರ್ಸಿಂಗ್ ಕಾಲೇಜ್, ಬೆಳಗಾವಿ ಮತ್ತು ಕಲಬುರಗಿ ಸೇರಿದಂತೆ ಪ್ರಾದೇಶಿಕ ಆಯುಕ್ತರ ಕಚೇರಿ ಒಳಗೊಂಡು ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದೆ ಎಂದು ಎದುರಾಳಿಗಳಿಗೆ ಟೀಕೆಗೆ ತಿರುಗೇಟು ನೀಡಿದ ಸಚಿವರು, ಒಟ್ಟು 150 ಎಕರೆ ಜಮೀನಿಗೆ ಬೇಲಿ ಹಾಕಿಸಿದ್ದೇ ನಾನು. ಆಸ್ಪತ್ರೆಗೆ ಅದಕ್ಕೆ ಬೇಲಿ ಕೂಡ ಇರಲಿಲ್ಲ. ಇದೀಗ ಕೇವಲ 100 ಕೋಟಿ ಅನುದಾನ ಕೊಟ್ಟರೆ ಸಾಕು. ಸರ್ಕಾರಿ ವೈದ್ಯಕೀಯ ಕಾಲೇಜ್ ತಲೆ ಎತ್ತಲಿದೆ. ಅದು ಕೂಡ ಏಕ ಕಾಲದಲ್ಲಿ ನೀಡಬೇಕಿಲ್ಲ; ಎರಡು ಹಂತದಲ್ಲಿ ಅನುದಾನ ನೀಡಿದರೂ ಸಾಕು. ಈ ನಿಟ್ಟಿನಲ್ಲಿ ಸಿಎಂ ಮತ್ತು ಡಿಸಿಎಂ ಗಮನ ಸೆಳೆಯುವುದಾಗಿಯೂ ತಿಳಿಸಿದರು.

ಮುಂದುವರಿದು, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಈವರೆಗೆ ಮಾನವ ಸಂಪನ್ಮೂಲ ಕೊಟ್ಟಿರಲಿಲ್ಲ. ಕಳೆದ ಅಧಿವೇಶನದಲ್ಲಿ ಜಗಳ ಮಾಡಿದಾಗ 200 ಹುದ್ದೆ ಮಂಜೂರಿಸಿದ್ದಾರೆ. ಅದಕ್ಕೆ ಬೇಕಾದ 40 ಕೋಟಿ ಕೊಡಲು ನಿರ್ಣಯಿಸಿದೆ ಎಂದರು.

ಪಿಪಿಪಿ ಮಾದರಿಗೆ ವಿರೋಧ

ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಯ ನಿರ್ಣಯ ಪಿಪಿಪಿ ಮಾದರಿಯಾಗಿ ಬದಲಾವಣೆಯಾಗಿದ್ದು ಯಾವಾಗ ಎಂಬುದು ಗೊತ್ತಿಲ್ಲ. ಸಚಿವರಾಗಿ ಮಾಹಿತಿ ಇಲ್ಲೆವೆಂದರೆ ಹೇಗೆ ಎಂದು ತಪ್ಪು ಭಾವಿಸಬೇಡಿ ಎಂದ ಸಚಿವ ಶಿವಾನಂದ ಪಾಟೀಲರು, ಕರ್ನಾಟಕದ ಯಾವುದೇ ಭಾಗದಲ್ಲಿ ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜ್ ಇಲ್ಲ. ಹೀಗಿರುವಾಗ ಜಿಲ್ಲೆಯಲ್ಲೇ ಪಿಪಿಪಿ ಮಾದರಿ ತರುವುದೇಕೆ? ಈ ಪಿಪಿಪಿ ಮಾದರಿಯಿಂದ ಜನಸಾಮಾನ್ಯರ ಸುಲಿಗೆಯಾಗಲಿದೆ ವಿನಃ ಅನುಕೂಲ ಮಾಡಿದಂತಾಗುವುದಿಲ್ಲ ಎಂದರು.

ಬಡವರ ಆಶಾಕಿರಣ

ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟಕ್ಕೆ ನಾನೂ ಧ್ವನಿ ಎತ್ತುವೆ. ನನ್ನ ಧ್ವನಿ ತಗ್ಗಿಸಬಹುದು. ಆದರೆ ಜನರ ಧ್ವನಿ ತಗ್ಗಿಸಲು ಸಾಧ್ಯವಿಲ್ಲವೆಂದು ತಮ್ಮದೇ ಸರ್ಕಾರಕ್ಕೆ ಪರೋಕ್ಷವಾಗಿ ಚಾಟಿ ಬೀಸಿದ ಸಚಿವರು, ಜಿಲ್ಲೆಗೆ ಸಿಕ್ಕಿರುವ ಅವಕಾಶವನ್ನು ಯಾರೂ ಕಳೆದುಕೊಳ್ಳಬಾರದು. ಈ ನಿಟ್ಟಿನಲ್ಲಿ ಜಿಲ್ಲೆಯ ಸಚಿವರು, ಶಾಸಕರಾದಿಯಾಗಿ ಎಲ್ಲರಲ್ಲೂ ಮನವಿ ಮಾಡುವೆ. ಹೋರಾಟ ನಡೆಸುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಏಕೆಂದರೆ ಇದೊಂದು ಮಹತ್ತರ ಕೊಡುಗೆ. ಈ ಭಾಗದಲ್ಲಿ ಬಡವರಿದ್ದಾರೆ. ಆರೋಗ್ಯ ಸೇವೆಗಳಿಗಾಗಿ ಮೀರಜ್, ಸಾಂಗಲಿ ಆಶ್ರಯಿಸುತ್ತಿದ್ದಾರೆ. ಜಿಲ್ಲೆಯಲ್ಲಿಯೇ ವೈದ್ಯಕೀಯ ಕಾಲೇಜ್ ಆದರೆ ಸಾಕಷ್ಟು ಬಡವರಿಗೆ ಸಹಾಯವಾಗಲಿದೆ ಎಂದರು.

ಏಮ್ಸ್‌ಗೆ ಒತ್ತಾಯ

ಜಿಲ್ಲೆಗೊಂದು ಏಮ್ಸ್ ತರುವಂತೆ ಈ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರಲ್ಲೂ ಮನವಿ ಮಾಡಿದ್ದೆ. ಅವರು ಧಾರವಾಡಕ್ಕೆ ತರಲು ಪ್ರಯತ್ನಿಸಿದ್ದರು. ಈ ಭಾಗದ ಸಂಸದರಲ್ಲೂ ಮನವಿ ಮಾಡುತ್ತೇನೆ. ಜಿಲ್ಲೆಗೆ ಏಮ್ಸ್‌ತರಲು ಪ್ರಯತ್ನಿಸಿ. ಆ ಮೂಲಕ ಜಿಲ್ಲೆಗೆ ಅವಿಸ್ಮರಣೀಯ ಕೊಡುಗೆ ನೀಡಿದಂತಾಗುತ್ತದೆ. ಅದಕ್ಕಾಗಿ ಎಲ್ಲರೂ ಪ್ರಯತ್ನಿಸೋಣ.

ಸರ್ಕಾರಿ ವೈದ್ಯಕೀಯ ಕಾಲೇಜ್ ಆದರೆ, ಅದಕ್ಕೆ ಬಂಥನಾಳ ಶ್ರೀಗಳ ಹೆಸರು ಇಡಬೇಕೆಂಬ ಆಶಯ ನನ್ನದಾಗಿತ್ತು. ಏಕೆಂದರೆ ಈ ಭಾಗದಲ್ಲಿ ಬಂಥನಾಳ ಶ್ರೀಗಳು ಶೈಕ್ಷಣಿಕ ಕ್ರಾಂತಿಗೈದಿದ್ದಾರೆ. ಯಾವುದೇ ಮೂಲಗೆ ಹೋದರೂ ಬಿಎಲ್‌ಡಿಇ ಸಂಸ್ಥೆಯ ಕಾಲೇಜ್‌ಗಳು ಸಿಗುತ್ತವೆ. ಇದಕ್ಕೆಲ್ಲ ಬಂಥನಾಳ ಶ್ರೀಗಳ ಕೊಡುಗೆ ಅಪಾರ ಎಂದರು.

ಧರಣಿ ನಿರತರಾದ ಅನೀಲ ಹೊಸಮನಿ, ಶ್ರೀನಾಥ ಪೂಜಾರಿ, ಅರವಿಂದ ಕುಲಕರ್ಣಿ, ಮಲ್ಲಿಕಾರ್ಜುನ ಬಟಗಿ, ಆಮ್ ಆದ್ಮಿ ಪಕ್ಷದ ಮುಖಂಡ ಭೋಗೇಶ ಸೋಲಾಪುರ, ಮಲ್ಲಿಕಾರ್ಜುನ ಕೆಂಗನಾಳ, ಲಕ್ಷ್ಮಣ ಹಂದ್ರಾಳ, ಮಲ್ಲಿಕಾರ್ಜುನ ಎಚ್.ಟಿ, ಸಿದ್ದಲಿಂಗ ಬಾಗೇವಾಡಿ, ಅಕ್ರಂ ಮಾಶ್ಯಾಳಕರ ಮತ್ತಿತರರಿದ್ದರು.