ಜಿಲ್ಲೆ

ಶಾಸಕಿ ಶಶಿಕಲಾ ಜೊಲ್ಲೆ ಪ್ರಶ್ನೆಗೆ ಸಚಿವ ಸತೀಶ ಉತ್ತರ

ನಿಪ್ಪಾಣಿ: ಲೋಕೋಪಯೋಗಿ ಇಲಾಖೆ ಅಧೀನದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ ನಿಪ್ಪಾಣಿ ಕ್ಷೇತ್ರ ವ್ಯಾಪ್ತಿಯಲ್ಲಿ ಭೋಜ-ಕಾರದಗಾ ರಸ್ತೆಯಲ್ಲಿ ದೂಧಗಂಗಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಟರ್ನ್‌ಕೀ ಆಧಾರದ ಮೇಲೆ 13.37 ಕೋಟಿ ರೂಪಾಯಿಗಳಲ್ಲಿ ಗುತ್ತಿಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಶಶಿಕಲಾ ಜೊಲ್ಲೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕಾಮಗಾರಿಗೆ ಇಲ್ಲಿಯವರೆಗೆ 13.64 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಸೇತುವೆ ಕಟ್ಟಡ ಭಾಗದ ಕಾಮಗಾರಿ ಪೂರ್ಣಗೊಂಡಿದ್ದು, ಸಂಪರ್ಕ ರಸ್ತೆಗಳ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕಾಗಿದೆ ಎಂದರು.

ಭೋಜ-ಕಾರದಗಾ ಗ್ರಾಮಗಳ ಹತ್ತಿರ ದೂಧಗಂಗಾ ನದಿಗೆ ಸೇತುವೆ ನಿರ್ಮಾಣ ಕಾಮಗಾರಿ ಮೂಲ ಅಂದಾಜಿನಲ್ಲಿ 24.60 ಮೀಟರ್ ಉದ್ದದ 4 ಅಂಕಣಗಳುಳ್ಳ ಒಟ್ಟು 98.40 ಮೀಟರ್ ಉದ್ದದ ಸೇತುವೆ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ, 2019ರಲ್ಲಿ ಉಂಟಾದ ಪ್ರವಾಹದ ಪರಿಣಾಮವಾಗಿ ಸೇತುವೆ ಉದ್ದ ಮತ್ತು ಎತ್ತರ ಪರಿಷ್ಕರಿಸಿ, 24.60 ಮೀಟರ್ ಉದ್ದದ 6 ಅಂಕಣಗಳುಳ್ಳ ಒಟ್ಟು 147.60 ಮೀಟರ್ ಉದ್ದಕ್ಕೆ ಸೇತುವೆ ಮಟ್ಟ 0.78 ಮೀಟರ್ ಹೆಚ್ಚಿಸಿ ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ.

ಭೋಜ-ಕಾರದಗ-ರೇಂದಲ ರಸ್ತೆಯಲ್ಲಿ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಸಂಪರ್ಕ ರಸ್ತೆಗಳನ್ನು ನಿರ್ಮಿಸಬೇಕಿದೆ ಎಂದು ತಿಳಿಸಿದರು.

ಗ್ರಾಮಸ್ಥರು ಹಾಗೂ ರೈತರ ಕೋರಿಕೆಯನ್ವಯ ಸೇತುವೆ ಎರಡೂ ಬದಿ ಸಂಪರ್ಕ

ರಸ್ತೆ ಕಿಂಡಿಗಳನ್ನು ಅಳವಡಿಸಲು ಕ್ರಮ ವಹಿಸಲಾಗಿರುತ್ತದೆ. ಸಂಪರ್ಕ ರಸ್ತೆ ಪ್ರಗತಿಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಉತ್ತರಿಸಿದರು.