ಜಿಲ್ಲೆ

ನಾಲಾ, ಚರಂಡಿ ಹೂಳೆತ್ತಲು ಸೂಚನೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ನಾಲಾ, ಗಟಾರದಲ್ಲಿ ಅರ್ಧ ಭಾಗ ಹೂಳು ತುಂಬಿಕೊಂಡಿದೆ. ಗಮನಕ್ಕೆ ಇದ್ದರೂ ಅಧಿಕಾರಿಗಳು ನಾಲಾ, ಗಟಾರ ಹೂಳೆತ್ತುವ ಕೆಲಸ ಮಾಡಿಲ್ಲ. ಇನ್ನೊಂದೆಡೆ ಸಾರ್ವಜನಿಕರು ಸಹ ಬೇಕಾಬಿಟ್ಟಿಯಾಗಿ ನಾಲಾ, ಚರಂಡಿಗಳಿಗೆ ಕಸ ಚೆಲ್ಲುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಜತೆಗೆ ಸಮರೋಪಾದಿಯಲ್ಲಿ ನಾಲಾ, ಗಟಾರ ಹೂಳೆತ್ತುವ ಕೆಲಸವನ್ನು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ವಿವಿಧೆಡೆ ಭಾನುವಾರ ವಿಶೇಷ ಸ್ವಚ್ಛತಾ ಅಭಿಯಾನ ನಡೆಸಿದ ಅವರು, ನಾಲಾ, ಚರಂಡಿಯಲ್ಲಿ ನೀರು ಮಾತ್ರ ಹರಿಯುತ್ತಿಲ್ಲ. ಪ್ಲಾಸ್ಟಿಕ್, ಕಸದ ಗುಡ್ಡೆ ಇದೆ. ಪಾಲಿಕೆ ಅಧಿಕಾರಿಗಳಂತೂ ವಾರ್ಡ್​ನಲ್ಲಿ ಓಡಾಡುವುದಿಲ್ಲ. ಆಯುಕ್ತರು ಮೇಲ್ವಿಚಾರಣೆ ಸರಿಯಾಗಿ ಮಾಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಖಾಲಿ ನಿವೇಶನಗಳನ್ನು ಮಾಲೀಕರು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಈ ಕುರಿತು ಮೊದಲು ಜಾಗೃತಿ ಮೂಡಿಸುತ್ತೇವೆ. ಅಷ್ಟಕ್ಕೂ ಕೇಳದಿದ್ದರೆ ಖಾಲಿ ಸೈಟ್ ಮಾಲೀಕರಿಗೆ ಮತ್ತು ಕಸ ಚೆಲ್ಲುವವರನ್ನು ಗುರುತಿಸಿ ದಂಡ ಹಾಕಬೇಕು. ಸರ್ಕಾರಿ ರಜಾ ದಿನ ಹಾಗೂ ಭಾನುವಾರಗಳಂದು ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಎನ್​ಎಸ್​ಎಸ್ ಹಾಗೂ ಇತರ ಸ್ವಯಂ ಸೇವಾ ಸಂಘಟನೆಗಳ ಸಹಯೋಗದಲ್ಲಿ ನಗರ ನೈರ್ಮಲ್ಯಕ್ಕಾಗಿ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಬೇಕು ಎಂದು ಸೂಚಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಪಾಲಿಕೆಯ ಅಧಿಕಾರಿ, ಸಿಬ್ಬಂದಿ ಮತ್ತು ಪೌರಕಾರ್ವಿುಕರು ಸೇರಿ 100 ಜನರ ತಂಡ ಮಾಡಿಕೊಂಡು ಪ್ರತಿ ವಾರ ಒಂದೊಂದು ವಾರ್ಡ್​ಗೆ ಒಂದು ತಂಡ ಕಳಿಸಿ, ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದರು.

ಸಿದ್ಧಾರೂಢ ಮಠ, ಹೆಗ್ಗೇರಿ ಕಾಲನಿ, ಗಣೇಶನಗರ, ಆನಂದನಗರ ಸರ್ಕಲ್, ರಾಮಲಿಂಗೇಶ್ವರ ನಗರ, ಗಾಂಧಿವಾಡ, ಕೇಶ್ವಾಪೂರ ಸೇರಿ ವಿವಿಧ ಪ್ರದೇಶಗಳಲ್ಲಿ ಸಚಿವ ಸಂತೋಷ ಲಾಡ್ ಪೌರಕಾರ್ವಿುಕರೊಂದಿಗೆ ಸ್ವಚ್ಛತಾ ಕಾರ್ಯ ನಡೆಸಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು, ಮೇಯರ್ ರಾಮಣ್ಣ ಬಡಿಗೇರ, ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ, ಡಿಸಿಪಿ ಮಹಾನಿಂಗ ನಂದಗಾವಿ, ಐಎಎಸ್ ಪೊ›ಬೇಷನರಿ ಅಧಿಕಾರಿ ರಿತಿಕಾ ವರ್ವ, ಉಪವಿಭಾಗಾಧಿಕಾರಿ ಶಾಲಂ ಹುಸೇನ, ಪಾಲಿಕೆ ಅಧೀಕ್ಷಕ ಇಂಜಿನೀಯರ್ ಆರ್. ವಿಜಯಕುಮಾರ, ಹುಡಾ ಆಯುಕ್ತ ಡಾ. ಸಂತೋಷ ಬಿರಾದಾರ, ಮುಖಂಡರಾದ ರಾಜಣ್ಣ ಕೊರವಿ, ನಾಗರಾಜ ಗೌರಿ, ದೀಪಕ ಚಿಂಚೋರೆ, ಇತರರು ಇದ್ದರು.