ಜಿಲ್ಲೆ

ವರ್ಷದೊಳಗೆ ಭದ್ರಾ ಮೇಲ್ದಂಡೆ ಪೂರ್ಣ

ಎನ್.ಆರ್.ಪುರ: 2021ರ ಮಾರ್ಚ್ ಹೊತ್ತಿಗೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸುವ ಗುರಿ ಹೊಂದಲಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಯಡಿ ತುಂಗಾ ನದಿಯಿಂದ 5.6 ಕಿಮೀ ಗುರುತ್ವ ಕಾಲುವೆ, ಕೆ.ಕಣಬೂರು ಕಾಲನಿ ಜಾಕ್​ವೆಲ್-1, ಕುಸುಬೂರು ಜಾಕ್​ವೆಲ್-2 ಅನ್ನು ಮುತ್ತಿನಕೊಪ್ಪ ಸಮೀಪ ಬುಧವಾರ ವೀಕ್ಷಣೆ ಮಾಡಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿವೆ. ಭೂಮಿ ನೀಡಿದ ರೈತರಿಗೆ ಪರಿಹಾರ ನೀಡಬೇಕಿದೆ. ಕೆಲವು ಭಾಗದಲ್ಲಿ ಅರಣ್ಯ ಇಲಾಖೆ ಒಪ್ಪಿಗೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕಾಮಗಾರಿಗಳ ವೀಕ್ಷಣೆ ನಡೆಸುತ್ತಿದ್ದೇನೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಚುರುಕುಗೊಳಿಸಲು ಮುಂದಿನ ವಾರ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳ ಸಭೆ ಕರೆಯಲಾಗುವುದು. 18 ಸಾವಿರ ಕೋಟಿ ರೂ. ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಯಿಂದ ರಾಜ್ಯದ 4 ಜಿಲ್ಲೆಗಳ 2.25 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿ ಆಗಲಿದೆ. ಯೋಜನೆಯಿಂದ ಮುತ್ತಿನಕೊಪ್ಪದಿಂದ ತುಮಕೂರು ಜಿಲ್ಲೆಯ ಪಾವಗಡದವರೆಗೆ ನೀರು ಹರಿಯಲಿದೆ. 4 ಜಿಲ್ಲೆಯ 367 ಕೆರೆಗಳು ಭರ್ತಿಯಾಗಲಿದ್ದು ಅಂತರ್ಜಲ ಹೆಚ್ಚಾಗಲಿದೆ. 2008ರಲ್ಲಿ ಪ್ರಾರಂಭವಾದ ಯೋಜನೆಗೆ 12 ಸಾವಿರ ಕೋಟಿ ರೂ. ನಿಗದಿ ಮಾಡಲಾಗಿತ್ತು. ಈಗ 18 ಸಾವಿರ ಕೋಟಿ ರೂ.ಗೆ ಪರಿಷ್ಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಲಕ್ಷ್ಮಣರಾವ್ ಪೇಶ್ವೆ, ಮುಖ್ಯ ಇಂಜಿನಿಯರ್ ರಾಘವನ್, ಅಧಿಕ್ಷಕ ಇಂಜಿನಿಯರ್ ವೇಣುಗೋಪಾಲ್, ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವ ಡಿ.ಎನ್.ಜೀವರಾಜ್, ಚಳ್ಳಕೆರೆ ಶಾಸಕ ರಘುಮೂರ್ತಿ, ಜಿಪಂ ಸದಸ್ಯ ಪಿ.ಆರ್.ಸದಾಶಿವ, ಮುತ್ತಿನಕೊಪ್ಪ ಗ್ರಾಪಂ ಅಧ್ಯಕ್ಷ ಶಫೀರ್ ಅಹಮ್ಮದ್, ಗ್ರಾಪಂ ಸದಸ್ಯ ಗೋಪಿ, ಪಿಡಿಒ ಸುಮಿತ್ರಾ, ತರೀಕೆರೆ ಉಪ ವಿಭಾಗಾಧಿಕಾರಿ ರೇಣುಕಾಪ್ರಸಾದ್, ತಹಸೀಲ್ದಾರ್ ಪರಮೇಶ್, ಇಒ ಎಸ್.ನಯನಾ ಇದ್ದರು.

ಬೋಟ್ ಪ್ರಯಾಣಕ್ಕೆ ಕ್ರಮ: ಎನ್.ಆರ್.ಪುರ ಸಮೀಪದ ಹೊಸ ಸೇತುವೆ ಬಳಿಯಿಂದ ಲಕ್ಕವಳ್ಳಿಗೆ ಬೋಟ್ ಸಂಚಾರ ಆರಂಭಿಸುವ ಬೇಡಿಕೆಯನ್ನು ಪರಿಶೀಲಿಸುವುದಾಗಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು. ಜನರಿಗೆ ಅನುಕೂಲವಾಗುವುದಾದರೆ ಬೋಟ್ ಸಂಚಾರ ಆರಂಭ ಮಾಡಲಾಗುವುದು ಎಂದು ಭರವಸೆ ನೀಡಿದರು. ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆ ನನೆಗುದಿಗೆ ಬಿದ್ದಿರುವುದರ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದರು.