ಶಿವರಾಜ 
ಜಿಲ್ಲೆ

ಸಚಿವ ರಾಜಣ್ಣ ವಜಾ ದಲಿತ ವಿರೋಧಿ ಕ್ರಮ

ದೇವದುರ್ಗ: ವಿನಾಕಾರಣ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ವಜಾ ಮಾಡುವ ಮೂಲಕ ರಾಜ್ಯ ಸರ್ಕಾರ ದಲಿತ ವಿರೋಧಿ ನೀತಿ ಪ್ರದರ್ಶಿಸಿದೆ ಎಂದು ಅಖಂಡ ದೇವದುರ್ಗ ಹೋರಾಟ ಸಮಿತಿ ಸಂಚಾಲಕ ಶಿವರಾಜ ನಾಯಕ ಕೊತ್ತದೊಡ್ಡಿ ಆರೋಪಿಸಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮತ ಕಳ್ಳತನ ವಿರುದ್ಧ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಚುನಾವಣೆ ಆಯೋಗದ ವಿರುದ್ಧ ಆರೋಪ ಮಾಡಿದ್ದರು. ಆದರೆ, ಆಯೋಗಕ್ಕೆ ಯಾವುದೇ ದೂರು, ದಾಖಲೆ ನೀಡದೆ ನುಣುಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಚಿವ ರಾಜಣ್ಣ, ನಮ್ಮ ಸರ್ಕಾರದ ಅವಧಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿದೆ.

ಇದರಲ್ಲಿ ನಮ್ಮದೂ ತಪ್ಪಿದೆ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸತ್ಯ ಅರಿಯದೆ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿದೆ. ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲದೆ ಕೆಲಸ ಮಾಡಿದ್ದಾರೆ. ಅವರಿಂದ ಪಕ್ಷಕ್ಕೆ ಮುಜುಗರವಾಗಿದ್ದರೆ ರಾಜೀನಾಮೆ ಪಡೆಯಬೇಕಿತ್ತು. ಅದು ಬಿಟ್ಟು ವಜಾ ಮಾಡುವ ಮೂಲಕ ನಾಯಕ ಸಮಾಜಕ್ಕೆ ಕಾಂಗ್ರೆಸ್ ಹೈಕಮಾಂಡ್ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ಭ್ರಷ್ಟಾಚಾರ ಆರೋಪದಡಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಸಿಲುಕಿದ್ದು ಅಬಕಾರಿ ಗುತ್ತಿಗೆದಾರರ ಸಂಘವೇ ದೂರು ನೀಡಿದೆ. ಸಚಿವ ಜಮೀರ್ ಅಹಮ್ಮದ್ ವಿರುದ್ಧವೂ ಅವರದ್ದೇ ಪಕ್ಷದ ಶಾಸಕರು ಆರೋಪ ಮಾಡಿ ದೂರು ಸಲ್ಲಿಸಿದ್ದರು. ಅಲ್ಲದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತಸಹಾಯಕನ ಕಿರುಕುಳದಿಂದ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದ ಆರೋಪವಿದೆ. ಇಷ್ಟೆಲ್ಲ ಭ್ರಷ್ಟಾಚಾರ ಆರೋಪವಿದ್ದರೂ ಕಾಂಗ್ರೆಸ್ ಹೈಕಮಾಂಡ್ ಅವರ ವಿರುದ್ಧ ಕ್ರಮಕೈಗೊಳ್ಳದೆ ಸಚಿವ ಕೆ.ಎನ್.ರಾಜಣ್ಣ ಅವರನ್ನು ರಾಜೀನಾಮೆ ಪಡೆಯದೆ ವಜಾ ಮಾಡುವ ಮೂಲಕ ನಾಯಕ ಸಮಾಜಕ್ಕೆ ಅಪಮಾನ ಮಾಡಿದೆ ಎಂದು ಟೀಕಿಸಿದರು. ಮುಖಂಡರಾದ ಹೊನ್ನಪ್ಪ ವಕೀಲ, ಮುದ್ದುರಂಗಪ್ಪ ನಾಯಕ, ಮಲ್ಲು ಇತರರಿದ್ದರು.