ಆಲಮಟ್ಟಿಯ ಕೆಬಿಜೆನ್ನೆಲ್ ಎಂಡಿ ಕಚೇರಿ ಸಭಾಂಗಣದಲ್ಲಿ ಶನಿವಾರ ಐಸಿಸಿ ಸಭೆ ಜರುಗಿತು. ಸಚಿವರಾದ ಶಿವಾನಂದ ಪಾಟೀಲ, ಶರಣಬಸಪ್ಪ ದರ್ಶನಾಪುರ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಎಚ್.ವೈ. ಮೇಟಿ, ಜೆ.ಟಿ. ಪಾಟೀಲ ಇತರರಿದ್ದರು.  
ಜಿಲ್ಲೆ

ತೊಗರಿ ಬೆಳೆಗೆ ನೀರು ಹರಿವು ಮುಂದುವರಿಕೆ

ಆಲಮಟ್ಟಿ: ಇಲ್ಲಿನ ಲಾಲ್ ಬಹದೂರ್ ಶಾಸಿ ಸಾಗರ ಮತ್ತು ಬಸವಸಾಗರ ಜಲಾಶಯ ವ್ಯಾಪ್ತಿಯ ವಿವಿಧ ಕಾಲುವೆ ಜಾಲದಡಿ ಬೆಳೆದು ನಿಂತಿರುವ ತೊಗರಿ ಬೆಳೆಗೆ ಸದ್ಯ ಕಾಳು ಕಟ್ಟುವ ಹಂತವಿರುವುದರಿಂದ ನೀರಿನ ಅವಶ್ಯಕತೆ ಪರಿಗಣಿಸಿ ನ. 17 ರಿಂದ 20 ರವರೆಗೆ ಸತತವಾಗಿ ನೀರು ಹರಿಸುವುದನ್ನು ಮುಂದುವರಿಸಲಾಗುವುದು ಎಂದು ಐಸಿಸಿ ಅಧ್ಯಕ್ಷ, ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಇಲ್ಲಿನ ಕೆಬಿಜೆನ್ನೆಲ್ ಎಂಡಿ ಕಚೇರಿ ಸಭಾಂಗಣದಲ್ಲಿ ಶನಿವಾರ ಐಸಿಸಿ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಾರಾಯಣಪುರ ಬಲದಂಡೆ ಕಾಲುವೆಗಳಿಗೆ ನ. 17ರಿಂದ 24ರವರೆಗೆ ಬಂದ್ ಪದ್ಧತಿ ಅನುಸರಿಸಿ ನ. 25ರಿಂದ 30ರವರೆಗೆ 6 ದಿನ ಕಾಲುವೆ ಜಾಲಕ್ಕೆ ದ್ವಿ ಋತು ಬೆಳೆಗಳಿಗಾಗಿ ನೀರು ಹರಿಸಲಾಗುವುದು. ನ.21 ರಿಂದ ಡಿ. 8ರವರೆಗೆ ಆಲಮಟ್ಟಿ ಜಲಾಶಯದ 1ನೇ ಹಂತ ಹಾಗೂ 2ನೇ ಹಂತದ ಕಾಲುವೆಗಳಿಗೆ ಮತ್ತು ನಾರಾಯಣಪುರ ಎಡದಂಡೆ ಕಾಲುವೆ ಹಾಗೂ ಉಪ ಕಾಲುವೆಗಳಡಿ ಹಾಗೂ ಡಿ.1 ರಿಂದ ಡಿ. 8ರವರೆಗೆ 8 ದಿನಗಳವರೆಗೆ ನಾರಾಯಣಪುರ ಬಲದಂಡೆ ಕಾಲುವೆ ಜಾಲದಲ್ಲಿ ಬಂದ್ ಪದ್ಧತಿ ಅನುಸರಿಸಲಾಗುವದು ಎಂದರು.

ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ 2024-25ನೇ ಸಾಲಿನ ಹಿಂಗಾರು ಹಂಗಾಮಿಗೆ ಡಿ. 12ರಿಂದ 2025ರ ಮಾ. 23ರವರೆಗೆ 14 ದಿನ ಚಾಲೂ ಹಾಗೂ 10 ದಿನ ಬಂದ್ ಪದ್ಧತಿ ಅನುಸರಿಸಿ ನೀರು ಪೂರೈಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

ನ.16 ರಂದು ಆಲಮಟ್ಟಿ ಡ್ಯಾಂನಲ್ಲಿ 104.33 ಟಿಎಂಸಿ ಮತ್ತು ನಾರಾಯಣಪುರ ಡ್ಯಾಂನಲ್ಲಿ 10.78 ಟಿಎಂಸಿ ಸೇರಿ ಎರಡೂ ಜಲಾಶಯಗಳಿಂದ ಒಟ್ಟು 115.11 ಟಿಎಂಸಿ ನೀರು ಲಭ್ಯವಿದ್ದು ಕಳೆದ ವರ್ಷಕ್ಕಿಂತ 42.25 ಟಿಎಂಸಿ ಹೆಚ್ಚಾಗಿದೆ ಎಂದರು.

ಡಿ.1ರಿಂದ 2025ರ ಜೂ. 30ರವರೆಗೆ ಕುಡಿಯುವ ನೀರು, ಕೆರೆಗಳನ್ನು ತುಂಬುವುದು, ಕಾಲುವೆಗಳ ಮೂಲಕ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಪೂರೈಸುವುದು, ಭಾಷ್ಪೀಕರಣ, ಉಷ್ಣ ವಿದ್ಯುತ್ ಸ್ಥಾವರಗಳು ಹಾಗೂ ಕೈಗಾರಿಕೆಗಳಿಗೆ, ಬ್ಯಾರೇಜ್‌ಗಳಲ್ಲಿ ನೀರಿನ ಸಂಗ್ರಹಣೆ, ರೈತರ ಹಿನ್ನೀರಿನ ಬಳಕೆ ಇತ್ಯಾದಿ ಸೇರಿ ಸಭೆಯಲ್ಲಿ ಚರ್ಚಿಸಿ 44 ಟಿಎಂಸಿ ನೀರನ್ನು ಕಾಯ್ದಿರಿಸಲಾಗಿದೆ. ಎಲ್ಲ ರೈತರು ನೀರನ್ನು ಹಿತಮಿತವಾಗಿ ಬಳಸಬೇಕು ಎಂದರು.

ಕ್ಲೋಸರ್ ಕಾಮಗಾರಿ ಕೈಗೊಳ್ಳಲು 138 ಕೋಟಿ ರೂ. ಅನುದಾನದಡಿ ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳಲಾಗುವುದು. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ನೀರು ಮರು ಹಂಚಿಕೆ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಚಿವರಾದ ಶಿವಾನಂದ ಪಾಟೀಲ, ಶರಣಬಸಪ್ಪ ದರ್ಶನಾಪುರ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಸಿ.ಎಸ್. ನಾಡಗೌಡ, ಎಚ್.ವೈ. ಮೇಟಿ, ಚೆನ್ನಾರೆಡ್ಡಿ ಪಾಟೀಲ ತುನ್ನೂರ, ಜೆ.ಟಿ. ಪಾಟೀಲ, ಅಶೋಕ ಮನಗೂಳಿ, ವಿಠ್ಠಲ ಕಟಕದೊಂಡ, ಕೆಬಿಜೆನ್ನೆಲ್ ಎಂಡಿ ಕೆ.ಪಿ. ಮೋಹನರಾಜ್, ಕೃಷ್ಣಾ ಕಾಡಾದ ಇಇ ವಿ.ಜಿ. ಕುಲಕರ್ಣಿ, ಅಧೀಕ್ಷಕ ಇಂಜಿನಿಯರ್ ವಿ.ಆರ್. ಹಿರೇಗೌಡರ ಹಾಗೂ ವಿವಿಧ ಜನಪ್ರತಿನಿಧಿಗಳು, ವಿವಿಧ ವಲಯಗಳ ಮುಖ್ಯ ಇಂಜಿನಿಯರ್‌ಗಳು, ಅಧಿಕಾರಿಗಳಿದ್ದರು.

ರೈತ ಸಂಘದ ಪ್ರತಿಭಟನೆ: ನೀರು ಮರು ಹಂಚಿಕೆ ಮಾಡಬೇಕು ಹಾಗೂ ಐಸಿಸಿ ಸಭೆಗೆ ರೈತ ಮುಖಂಡರನ್ನು ಆಹ್ವಾನಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಕೆಬಿಜೆಎನ್‌ಎಲ್ ಎಂಡಿ ಕಚೇರಿಯ ಮುಖ್ಯದ್ವಾರದ ಎದುರು ಪ್ರತಿಭಟನೆ ನಡೆಸಿದರು. ನೀರು ಹಂಚಿಕೆ ಸಂದರ್ಭದಲ್ಲಿ ಅವಳಿಗೆ ಜಿಲ್ಲೆಗೆ ಅನ್ಯಾಯವಾಗಿದೆ. ಆಲಮಟ್ಟಿ ಡ್ಯಾಂ ನಿರ್ಮಾಣಕ್ಕಾಗಿ ಅವಳಿ ಜಿಲ್ಲೆಯ ಜನ ಜಮೀನು, ಮನೆ, ಮಠ ಕಳೆದುಕೊಂಡಿದ್ದಾರೆ. ನಮಗೆ ಅಗತ್ಯವಿದ್ದಾಗ ನೀರು ಕೊಡುವುದಿಲ್ಲ. ಬೆಳೆಗಳಿಗೆ ಯಾವ ಹಂತದಲ್ಲಿ, ಎಷ್ಟು ಪ್ರಮಾಣದಲ್ಲಿ ನೀರು ಬೇಕು ಎಂಬುದು ರೈತರು, ರೈತ ಮುಖಂಡರಿಗೆ ಗೊತ್ತಾಗುತ್ತದೆ. ಹೀಗಾಗಿ ಐಸಿಸಿ ಸಭೆಗೆ ರೈತ ಮುಖಂಡರನ್ನು ಆಹ್ವಾನಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಸಚಿವ ಆರ್.ಬಿ.ತಿಮ್ಮಾಪುರ, ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಲಾಗುವುದು ಎಂದು ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಪಟ್ಟಿಯನ್ನು ರೈತರಿಗೆ ನೀಡಿ ತೆರಳಿದರು.