ಅಜ್ಜಂಪುರ: ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರದ ಜಾಗ ಒತ್ತುವರಿಯನ್ನು ಶೀಘ್ರ ತೆರವುಗೊಳಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸ್ಪಷ್ಟಪಡಿಸಿದರು.
ಭಾನುವಾರ ಕಾಟಿಗನೆರೆ ಗ್ರಾಮದ ಸಾವಯವ ಕೃಷಿ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ತಳಿ ಸಂವರ್ಧನಾ ಕೇಂದ್ರ ಪುನಶ್ಚೇತನಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಸರ್ಕಾರಕ್ಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರಗಳಲ್ಲಿಯೇ ವಾಸ್ತವ್ಯ ಹೂಡುವ ಮೂಲಕ ನೈಜ ಚಿತ್ರಣ ತಿಳಿದು ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಸರ್ಕಾರ ಗೋಶಾಲೆಗಳನ್ನು ತೆರೆಯಲು ನಿರ್ಧರಿಸಿದೆ. ಇದರಿಂದ ಸಾವಯವ ಕೃಷಿಗೆ ಉತ್ತೇಜನ, ಗೋಮೂತ್ರ ಹಾಗೂ ಸಗಣಿಯಿಂದ ಯಾವ್ಯಾವ ಉತ್ಪನ್ನ ತಯಾರಿಸಬಹುದು ಎಂಬ ಕುರಿತು ತಿಳಿಯಲು ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ ಎಂದು ಹೇಳಿದರು.
ಸಾವಯವ ಕೃಷಿ ಕೇಂದ್ರದ ಶಿವಪ್ರಸಾದ್ ಮಾತನಾಡಿ, ಗೋವು ಸಾಕಣೆ ಕೇವಲ ಹಾಲು ಉತ್ಪಾದನೆಗಲ್ಲ. ಇದರಿಂದ ಕೃಷಿಗೂ ಲಾಭಾದಾಯಕ. ಎರಡು ವರ್ಷದಿಂದ ಸಾವಯವ ಗೊಬ್ಬರ ಜತೆಗೆ 20ಕ್ಕೂ ಹೆಚ್ಚಿನ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಸರ್ಕಾರದ ನೆರವಿನ ಅಗತ್ಯವಿದೆ ಎಂದರು.
ಪಶುವೈದ್ಯಾಧಿಕಾರಿ ಡಾ. ಗಿರೀಶ್ ಮಾತನಾಡಿ, ಹಸು ಮೃತಪಟ್ಟ ನಂತರವೂ ಸಾಕಷ್ಟು ಪ್ರಯೋಜನಕ್ಕೆ ಬರಲಿದೆ. ಕಳೇಬರ ಸಂಸ್ಕರಣೆ ಮಾಡುವುದರಿಂದ ಕೃಷಿ ಚಟುವಟಿಕೆ ಬಳಸಬಹುದು. ಇದಕ್ಕೆ ಗೋನಂದಾಜಲ ಎಂಬ ಹೆಸರಿಡಲಾಗಿದೆ. ಇದಕ್ಕೆ ಸರ್ಕಾರ ಅಧಿಕೃತ ಅನುಮೋದನೆ ನೀಡಬೇಕು ಎಂದರು.
ಸಾವಯವ ಕೃಷಿಕರ ಸಂಘದ ಅಧ್ಯಕ್ಷ ನಂಜುಂಡಪ್ಪ ಮಾತನಾಡಿ, ಗೋಹತ್ಯೆ ನಿಷೇಧದಿಂದ ಭಾರತೀಯ ಸನಾತನ ಪರಂಪರೆ ಉಳಿದಂತಾಗಿದೆ. ಗೋಶಾಲೆಗಳ ಮೂಲಕ ಸಾವಯವ ಕೃಷಿಗೆ ಉತ್ತೇಜನ ನೀಡಿ, ಮಣ್ಣಿನ ಫಲವತ್ತತೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು. ಸಾವಯವ ಕೃಷಿಕ ವೀರಣ್ಣ ಇತರರಿದ್ದರು.