ತುಮಕೂರು: ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತ ಕಮಾನು ನಿರ್ಮಿಸುವ ಕುರಿತು ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯಖಾತೆ ಸಚಿವ ವಿ.ಸೋಮಣ್ಣ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಸೋಮವಾರ ಬೆಂಗಳೂರಿನಲ್ಲಿ ಭೇಟಿ ಮಾಡಿ ಈ ಸಂಬಂಧ ಕೇಂದ್ರ ಹಸಿರು ನಿಶಾನೆಗೆ ಪ್ರಸ್ತಾವನೆ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪರಂ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತ ಕಮಾನು ನಿರ್ಮಿಸಲು ಸ್ಮಾರ್ಟ್ ಸಿಟಿಯಿಂದ 5 ಕೋ.ರೂ., ಒದಗಿಸಿಕೊಂಡಿದ್ದೇವೆ. ಇದಕ್ಕೆ ಕೇಂದ್ರ ಸರ್ಕಾರದ ಅನುಮತಿಯಾಗಬೇಕಿದೆ. ಕೇಂದ್ರದ ಸಚಿವ ವಿ.ಸೋಮಣ್ಣ ನಮ್ಮ ಜಿಲ್ಲೆಯ ಸಂಸದರು. ಕೇಂದ್ರದ ಭೂಹೆದ್ದಾರಿ ಸಚಿವ ನಿತೀನ್ ಗಡ್ಕರಿ ಅವರಿಗೆ ವಿ.ಸೋಮಣ್ಣ ಮೂಲಕ ಮನವಿ ನೀಡಿ, ಅನುಮತಿಯನ್ನು ಕೊಡಿಸುವಂತೆ ಕೇಳಿದ್ದೇನೆ. ಅನುಮತಿ ಕೊಟ್ಟರೆ ತುಮಕೂರಿನ ಆರಂಭದಲ್ಲಿ ಸ್ವಾಗತ ಕಮಾನು ನಿರ್ಮಿಸುತ್ತೇವೆ ಎಂದು ತಿಳಿಸಿದರು.
ನಮ್ಮ ಜಿಲ್ಲೆಗೆ ಕೇಂದ್ರದ ಅನೇಕ ಯೋಜನೆಗಳು ಆಗಬೇಕಿದೆ. ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಅನೇಕ ಯೋಜನೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ಇದರಲ್ಲಿ ನಮ್ಮ ತಾಲ್ಲೂಕು ಸೇರಿದ್ದು, ಅವರೊಂದಿಗೆ ಚರ್ಚಿಸಿದ್ದೇನೆ. ನಗರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವುದರಿಂದ ಪ್ರಯಾಣದ ವೇಳೆ ಯಾರಿಗೂ ಗೊತ್ತಾಗುವುದಿಲ್ಲ. ಸ್ವಾಗತ ಕಮಾನು ನಿರ್ಮಿಸಿದರೆ ಗೊತ್ತಾಗುತ್ತದೆ. ಈ ನಿಟ್ಟಿನಲ್ಲಿ 5 ಕೋಟಿ ರೂ. ಹಣ ಒದಗಿಸಿಕೊಂಡಿದ್ದೇವೆ ಎಂದು ಹೇಳಿದರು.
ಅರ್ಬನ್ ರೈಲು ಬರಲಿ: ತುಮಕೂರಿಗೆ ಮೆಟ್ರೋ ರೈಲ್ವೆ ಯೋಜನೆ ಬಗ್ಗೆ ರಾಜ್ಯ ಸರ್ಕಾರದ ತೀಮಾರ್ನಗಳು ಏನಾಗುತ್ತದೆ ಎಂಬುದನ್ನು ನೋಡಿ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಜತೆ ಮಾತನಾಡುತ್ತೇನೆ. ತುಮಕೂರಿಗೆ ಮೆಟ್ರೋ ರೈಲು ಅಗತ್ಯ ಇದೆ ಎಂದು ಸೋಮಣ್ಣ ಹೇಳಿದ್ದು ಅದರ ಜತೆಗೆ ಸಬ್ ಅರ್ಬನ್ ರೈಲ್ವೆ ಯೋಜನೆಯು ಆಗಲಿ ಎಂದು ಸಚಿವ ಪರಮೇಶ್ವರ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ತುಮಕೂರು ಅತಿ ವೇಗವಾಗಿ ಬೆಳೆಯುತ್ತಿದೆ. 20 ಸಾವಿರ ಎಕರೆಯಲ್ಲಿ ಇಂಡಸ್ಟ್ರೀಯಲ್ ಹಬ್ ಮಾಡಿದ್ದೇವೆ. ಬಹಳ ಜನ ತುಮಕೂರನ್ನು ವಿಸ್ತರಣೆ ಮಾಡಬೇಕು ಎಂದು ಕೇಳುತ್ತಿದ್ದಾರೆ. ಈ ಬಗ್ಗೆ ಅಧ್ಯಯನ ನಡೆಯುತ್ತಿದೆ. ಬೆಂಗಳೂರಿಗೆ ತುಮಕೂರು 70 ಕಿ.ಮೀ.ನಲ್ಲಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸಿಕೊಂಡರೆ ಅಭಿವೃದ್ಧಿ ದೃಷ್ಟಿಯಿಂದ ಅನುಕೂಲವಾಗುತ್ತದೆ. ನಾವು ಕೂಡ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಹೇಳಿದರು.