ತುಮಕೂರು: ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಎಲ್ಲಾ ಪೌರ ಕಾರ್ಮಿಕರನ್ನು ಕಾಯಂ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.
ನಗರದ ದಿಬ್ಬೂರಿನ ಬಿ.ಎಚ್.ಪಾಳ್ಯದಲ್ಲಿ ಶನಿವಾರ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಾಲಿಕೆಯ 27 ಮಹಿಳೆಯರು ಸೇರಿದಂತೆ 121 ಪೌರ ಕಾರ್ಮಿಕರನ್ನು ಕಾಯಂ ಮಾಡಲಾಗಿದೆ. ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ವಾಲ್ವ್‌ಮೆನ್, ಚಾಲಕರು, ಲೋಡರ್ಸ್, ಹೆಲ್ಪರ್ಸ್‌ಗಳನ್ನು ಸಹ ಕಾಯಂ ಮಾಡುವಂತೆ ಬೇಡಿಕೆ ಇದ್ದು, ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಭರವಸೆಯಿತ್ತರು.
ಪಾಲಿಕೆಗೆ 507 ಪೌರ ಕಾರ್ಮಿಕರ ಹುದ್ದೆಗಳು ಮಂಜೂರಾಗಿದ್ದು, ಪ್ರಸ್ತುತ 222 ಕಾಯಂ ಹಾಗೂ 221 ನೇರ ಪಾವತಿ ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಗುತ್ತಿಗೆ ಪೌರ ಕಾರ್ಮಿಕರಿಗೆ ವೇತನ ನೇರ ಪಾವತಿಯಾಗುತ್ತಿರುವುದರಿಂದ ಗುತ್ತಿಗೆದಾರರಿಂದ ಆಗುತ್ತಿದ್ದ ಶೋಷಣೆ ತಪ್ಪಿದೆ. ಸೇವೆಗೆ ತಕ್ಕ ವೇತನ ಪಾವತಿಯಾಗುತ್ತಿದೆ ಎಂದರು.
ನಗರದ ಡಿ.ಎಂ.ಪಾಳ್ಯದಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ ವಸತಿಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಕಳೆದ ಬಾರಿಯ ಅಧಿಕಾರಾವಧಿಯಲ್ಲಿ ಸುಮಾರು 14 ಲಕ್ಷ ವಸತಿಗಳನ್ನು ನಿರ್ಮಾಣ ಮಾಡಿ ಅರ್ಹರಿಗೆ ಹಂಚಿಕೆ ಮಾಡಲಾಗಿತ್ತು. ಈ ಬಾರಿಯೂ ಸಹ ಅರ್ಹ ಬಡವರಿಗೆ, ನಿರ್ಗತಿಕರಿಗೆ ವಸತಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ ತಿಳಿಸಿದರು.