ಜಿಲ್ಲೆ

ಸಚಿವ ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ : ಸಹಕಾರ ಸಚಿವ ಸೋಮಶೇಖರ್

ತುಮಕೂರು : ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದು, ಯಾರಿಗೆ ಸಚಿವ ಸ್ಥಾನ ಕೊಡಬೇಕು, ಯಾರನ್ನು ಕೈ ಬಿಡಬೇಕು ಎಂದು ಅವರೇ ನಿರ್ಧರಿಸುತ್ತಾರೆ, ಕೊಟ್ಟ ಮಾತಿನಂತೆ ಮುನಿರತ್ನ ಅವರಿಗೆ ಸಚಿವ ಸ್ಥಾನ ಕೊಡುತ್ತಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಸಿದ್ಧಗಂಗಾ ಮಠಕ್ಕೆ ಸೋಮವಾರ ಸಂಜೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಜತೆ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷ ಶ್ರೀ ಸಿದ್ದಲಿಂಗಸ್ವಾಮೀಜಿ ಆಶೀರ್ವಾದ ಪಡೆದು ಸುದ್ದಿಗಾರರ ಜತೆ ಮಾತನಾಡಿದರು.

ರಾಜರಾಜೇಶ್ವರಿ ನಗರದ ನೂತನ ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ ಕೊಡುತ್ತಾರೆ ಎಂಬ ನಂಬಿಕೆ ನಮ್ಮೆಲ್ಲರಿಗೆ ಇದೆ, ಮುಖ್ಯಮಂತ್ರಿಗಳು ಇದುವರೆಗೂ ಮಾತಿಗೆ ತಕ್ಕಂತೆ ನಡೆದುಕೊಂಡಿದ್ದಾರೆ. ಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ಕೊಟ್ಟಿದ್ದರೆ, ಸೋತವರಿಗೂ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದಾರೆ. ಇನ್ನು ಉಳಿದವರಿಗೆ ಏನು ಮಾಡಬೇಕು ಎಂಬ ವಿಚಾರ ಸಿಎಂಗೆ ಗೊತ್ತಿದೆ ಎಂದರು.

ಬಿಜೆಪಿಯಲ್ಲಿ 105 ಜನ ಶಾಸಕರಿದ್ದರು. ಅವರ ಜತೆಗೆ ನಾವು 17 ಜನ ಹೊಸದಾಗಿ ಸೇರ್ಪಡೆಯಾದೆವು. ಸಹಜವಾಗಿಯೇ ಅವರಿಗೂ ಸಚಿವ ಸ್ಥಾನ ಕೊಡುವ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿದೆ, 17 ಜನರಿಗೂ ಏನಾದರೂ ಮಾಡಬೇಕು ಎಂಬ ಹೊಣೆಯೂ ಅವರ ಮೇಲಿದೆ. ಹಾಗಾಗಿ ಎಲ್ಲವನ್ನೂ ಮುಖ್ಯಮಂತ್ರಿಗಳು ನಿಭಾಯಿಸುತ್ತಾರೆ ಎಂದರು.

ಸ್ಮಾರ್ಟ್‌ಸಿಟಿ ಕಾಮಗಾರಿ ತ್ವರಿತ : ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಮಾತನಾಡಿ, ಸಿದ್ಧಗಂಗಾ ಶ್ರೀಗಳು ಸ್ಮಾರ್ಟ್‌ಸಿಟಿ ಕಾಮಗಾರಿಯನ್ನು ಗುಣಮಟ್ಟದಿಂದ ತ್ವರಿತವಾಗಿ ಮುಗಿಸುವಂತೆ ಸೂಚಿಸಿದ್ದಾರೆ, ತುಮಕೂರು, ದಾವಣಗೆರೆ, ಶಿವಮೊಗ್ಗ ಸೇರಿದಂತೆ ಸ್ಮಾರ್ಟ್‌ಸಿಟಿ ಯೋಜನೆಗೆ ಒಳಪಟ್ಟಿರುವ ನಗರಗಳಿಗೆ ತಾವು ಆಗಿಂದಾಗ್ಗೆ ಭೇಟಿ ನೀಡುತ್ತಿದ್ದು, ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಲಾಗಿದೆ. ಹಾಗೆಯೇ ಶೀಘ್ರವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆಯೂ ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.