ಜಿಲ್ಲೆ

ಇಪ್ಪತೈದು ಕೋಟಿ ರೂ ಅನುದಾನ ಎಲ್ಲಿ?: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನೆ

ಮಂಡ್ಯ: ಎಚ್.ಡಿ.ಕುಮಾರಸ್ವಾಮಿ ಅವರು ಮೈಶುಗರ್ ಪ್ರೌಢಶಾಲೆಗೆ 25 ಕೋಟಿ ರೂ ಅನುದಾನ ಕೊಡಿಸುವುದಾಗಿ ೋಷಣೆ ಮಾಡಿದ್ದರು. ಆದರೆ ಈವರೆಗೆ ಹಣ ಬಿಡುಗಡೆಗೊಂಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.

ನಗರದ ಪ್ರವಾಸಿಮಂದಿರದಲ್ಲಿ ಎಂಡಿಸಿಸಿ ಬ್ಯಾಂಕ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಂಬಂಧ ಆಯೋಜಿಸಿದ್ದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಗಾರಿಕಾ ಮಂತ್ರಿಯಾಗಿರುವುದರಿಂದ ಎಚ್‌ಡಿಕೆ ಅವರಿಗೆ ರಾಷ್ಟ್ರದ ಕೈಗಾರಿಕಾ ಸಂಸ್ಥೆಗಳಿಂದ ಅನುದಾನ ಬರುತ್ತದೆ. ಆದಾಗ್ಯೂ ಶಾಲೆಗೆ ಅನುದಾನ ಕೊಟ್ಟಿಲ್ಲ. ಎಲ್ಲದಕ್ಕೂ ಸಿಎಸ್‌ಆರ್ ಅನುದಾನ ಎನ್ನುತ್ತಾರೆ. ಎಲ್ಲಿಗೂ ಆ ಅನುದಾನ ಬರುತ್ತಿಲ್ಲ. ಲೋಕಸಭಾ ಸದಸ್ಯರಾಗಿ ಮಂಡ್ಯ ಜಿಲ್ಲೆಗೆ ಒಂದೂವರೆ ತಿಂಗಳಿಂದಲೂ ಬಂದಿಲ್ಲ. ನಾವು ಅವರ ಆರೋಗ್ಯ ಚೆನ್ನಾಗಿರಲೆಂದು ಆಶಿಸುತ್ತೇವೆ. ಪಾರ್ಲಿಮೆಂಟ್‌ಗೆ ಹೋಗುತ್ತಾರೆ. ಪ್ರಧಾನ ಮಂತ್ರಿ ನರೇಂದ್ರಮೋದಿ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಆದರೆ ಮಂಡ್ಯಕ್ಕೆ ಏಕೆ ಬಂದಿಲ್ಲ ಎಂದು ಪ್ರಶ್ನಿಸಿದರು.

ರೈತ ಪರ ಸಂಘಟನೆಗಳು, ನಾವುಗಳು ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಬಾರದೆಂದು ಪಣತೊಟ್ಟಿದ್ದೇವು. ಆದರೆ ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಾರ್ಖಾನೆಯನ್ನು ಖಾಸಗಿಕರಣಗೊಳಿಸಲು ಟೆಂಡರ್ ಕರೆಯಲಾಗಿತ್ತು. ಆ ವೇಳೆ ಕಾರ್ಖಾನೆಯನ್ನು ಸಾಧ್ಯವಾದರೆ ನಡೆಸಿ ಇಲ್ಲವಾದರೆ ಬಿಡಿ. ಖಾಸಗಿಕರಣ ಮಾಡಬೇಡಿ ಎಂದು ಪ್ರತಿಭಟಿಸಿದ್ದೆವು. ಕಾರಣಾಂತರದಿಂದ ಅ ಯೋಜನೆ ಅರ್ಧಕ್ಕೆ ನಿಂತಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಕಾರ್ಖಾನೆಗೆ ಚಾಲನೆ ನೀಡಲಾಯಿತು. 117 ಕೋಟಿ ಅನುದಾನವನ್ನು ಕಾರ್ಖಾನೆ ಅಭಿವೃದ್ಧಿ ನೀಡಲಾಗಿದೆ. ಮೈಶುಗರ್‌ನ ಬಾಯ್ಲರ್‌ನಲ್ಲಿ ಸಮಸ್ಯೆ ಇದೆ. ಅದನ್ನು ಸರಿಪಡಿಸಿದರೆ ದಿನಕ್ಕೆ 5000 ಟನ್ ಕಬ್ಬು ನುರಿಸಬಹುದು ಎಂದು ಹೇಳಿದರು.

ಮಂಡ್ಯದಲ್ಲಿ ರಿಂಗ್‌ರೋಡ್ ಮಾಡಲು ಜಾಗ ಇನ್ನೂ ಅಂತಿಮವಾಗಿಲ್ಲ. ಮಂಡ್ಯ ಮತ್ತು ಶ್ರೀರಂಗಪಟ್ಟಣ ಎರಡಕ್ಕೂ ಈ ಯೋಜನೆ ಸಂಬಂಧಪಟ್ಟಿರುವುದರಿಂದ ಇಬ್ಬರೂ ಶಾಸಕರೊಂದಿಗೆ ಚರ್ಚಿಸಿ ಮುಡಾ ಆಯುಕ್ತರು ಹಾಗೂ ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿ, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ರಿಂಗ್‌ರೋಡ್ ನಿರ್ಮಾಣಕ್ಕೆ 900 ಕೋಟಿ ರೂ ಅನುದಾನ ಕೊಡಿಸುವುದಾಗಿ ಹೇಳಿದ್ದಾರೆ. ಅದರಂತೆ 900 ಕೋಟಿ ರೂ ಅನುದಾನ ನೀಡಿದರೆ ಮಂಡ್ಯದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸನ್ಮಾನ ಮಾಡೋಣ ಎಂದು ಸವಾಲು ಹಾಕಿದರು.

ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಪೊಲೀಸ್ ಜವಾಬ್ದಾರಿಯಾಗಿದೆ. ಆದ್ದರಿಂದಲೇ ನಾಗಮಂಗಲದ ಮಸೀದಿ ಮುಂದೆ ಸಾಗುವ ಕೆಲವು ಗಣಪತಿ ವಿಗ್ರಹಗಳ ಮೆರವಣಿಗೆಗೆ ನಿರ್ಬಂಧ ಹೇರಲಾಗಿದೆ. ಮೊದಲಿನಿಂದಲೂ ನಾಗಮಂಗಲದ ಮಸೀದಿ ಮುಂದೆ ಸಾಗುತ್ತಿದ್ದ ಕೆಲವು ಗಣಪತಿ ಮೆರವಣಿಗೆಗೆ ಅನುಮತಿ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹೊಸದಾಗಿ ಪ್ರತಿಷ್ಠಾಪಿಸಲಾದ ಗಣೇಶ ವಿಗ್ರಹಗಳ ಮಸೀದಿ ದಾರಿಯಲ್ಲಿ ಹೋಗಲು ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.

ಕ್ಯಾಬಿನೆಟ್‌ನಲ್ಲಿ ಮುಖ್ಯಮಂತ್ರಿಗಳು ಎಲ್ಲ ಶಾಸಕರಿಗೂ ಗಣಪತಿ ಪ್ರತಿಷ್ಠಾಪನೆ ಮತ್ತು ಮೆರವಣಿಗೆಯ ಕುರಿತು ಒತ್ತಡದಿಂದ ತೀರ್ಮಾನ ತೆಗೆದುಕೊಳ್ಳಬೇಡಿ ಹಾಗೂ ಯಾವುದೇ ಅಹಿತಕರ ಘಟನೆ ಉಂಟಾಗದಂತೆ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುತ್ತದೆ ಎಚ್ಚರಿಕೆ ವಹಿಸಿ ಎಂದು ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲೂ ಸಹ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಸೂಕ್ತವಾಗಿ ಗಣಪತಿ ವಿಸರ್ಜನೆ ಮಾಡಲು ತಿಳಿಸಿದ್ದೇನೆ ಎಂದರು.

ಶಾಸಕರಾದ ಕೆ.ಎಂ.ಉದಯ್, ರಮೇಶ ಬಂಡಿಸಿದ್ದೇಗೌಡ, ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗೀಗೌಡ ಇತರರಿದ್ದರು.

ಚುನಾವಣೆಗೆ ‘ಕೈ’ ಅಭ್ಯರ್ಥಿಗಳ ಘೋಷಣೆ

ನವೆಂಬರ್ ತಿಂಗಳಲ್ಲಿ ನಡೆಯಲಿರುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ 12 ನಿರ್ದೇಶಕ ಸ್ಥಾನದ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಹೆಸರನ್ನು ಸಚಿವ ಎನ್.ಚಲುವರಾಯಸ್ವಾಮಿ ಘೋಷಣೆ ಮಾಡಿದರು

ಕೈಗಾರಿಕಾ ಕ್ಷೇತ್ರದಿಂದ ಹಾಲಿ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಬಳಕೆದಾರರ ಸಂಘದಿಂದ ಹಾಲಹಳ್ಳಿ ಅಶೋಕ್‌ಕುಮಾರ್, ನಾಗಮಂಗಲ, ಪಾಂಡವಪುರ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ ಹಾಲು ಉತ್ಪಾದಕರ ಸಹಕಾರ ಸಂಘದಿಂದ ವಿಜಯೇಂದ್ರಮೂರ್ತಿ, ಮಂಡ್ಯ, ಮಳವಳ್ಳಿ, ಮದ್ದೂರು ಹಾಲು ಉತ್ಪಾದಕರ ಸಹಕಾರ ಸಂಘದಿಂದ ಚಲುವರಾಜು, ಎಲ್ಲ ತಾಲೂಕು ಕೃಷಿ ಉತ್ಪನ್ನ ಸಹಕಾರ ಸಂಘಗಳಿಂದ ದಿನೇಶ್, ಮಂಡ್ಯ ತಾಲೂಕಿನಿಂದ ಎಸ್.ಸತೀಶ್, ಮಳವಳ್ಳಿಯಿಂದ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮದ್ದೂರಿನಿಂದ ಸಂದರ್ಶ, ನಾಗಮಂಗಲದಿಂದ ಸಚ್ಚಿನ್ ಚಲುವರಾಯಸ್ವಾಮಿ, ಕೆ.ಆರ್.ಪೇಟೆ ಕ್ಷೇತ್ರದಿಂದ ಅಂಬರೀಷ್ ಹಾಗೂ ಪಾಂಡವಪುರ, ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಕ್ಷೇತ್ರಗಳು ಒಳಪಡುವ ಮೂರು ತಾಲೂಕಿನ ಶಾಸಕರು ಒಟ್ಟಾಗಿ ಚರ್ಚಿಸಿ ತೀರ್ಮಾನ ಮಾಡಲಿದ್ದಾರೆ ಎಂದು ತಿಳಿಸಿದರು.