ಬೆಳ್ತಂಗಡಿ: ಬೆಂಗಳೂರಿನ ಬಜೆಟ್ ಅಧಿವೇಶನ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ಬೆಳ್ತಂಗಡಿ ವಕೀಲರ ಸಂಘದ ನಿಯೋಗ, ಕಾನೂನು ಸಚಿವ ಎಚ್.ಕೆ.ಪಾಟೀಲ್, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ನೂತನ ನ್ಯಾಯಾಲಯ ಕಟ್ಟಡಕ್ಕೆ ಮನವಿ ಸಲ್ಲಿಸಿತು.
ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ, ಹಿರಿಯ ವಕೀಲರ ಸಮಿತಿ ಚೇರ್ಮನ್ ಅಲೋಶಿಯಸ್ ಎಸ್.ಲೋಬೊ, ಅಪರ ಸರ್ಕಾರಿ ವಕೀಲ ಮನೋಹರ ಕುಮಾರ್ ಎ. ಮತ್ತು ಮಾಜಿ ಅಧ್ಯಕ್ಷ ಶಿವಕುಮಾರ್ ಎಸ್.ಎಂ. ಉಪಸ್ಥಿತರಿದ್ದರು.
ಇತ್ತೀಚೆಗೆ ಬೆಳ್ತಂಗಡಿಯಲ್ಲಿ ನಡೆದ ಅಪರ ಸರ್ಕಾರಿ ವಕೀಲರ ಕಚೇರಿ ಉದ್ಘಾಟನೆ ಮತ್ತು ವಕೀಲರ ಸಂಘದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಐವನ್ ಡಿಸೋಜ, ಬೆಳ್ತಂಗಡಿಯ 60 ವರ್ಷ ಹಳೆಯ ನ್ಯಾಯಾಲಯ ಕಟ್ಟಡ ವೀಕ್ಷಿಸಿ ಸರ್ಕಾರದಮಟ್ಟದಲ್ಲಿ ಹೊಸ ನ್ಯಾಯಾಲಯದ ಕಟ್ಟಡ ಮಂಜೂರಾತಿಗೆ ಬಜೆಟ್‌ನಲ್ಲಿ ಅನುದಾನ ನೀಡಲು ಒತ್ತಡ ತರುವ ಬಗ್ಗೆ ವಕೀಲರ ನಿಯೋಗವನ್ನು ಸಂಬಂಧಪಟ್ಟ ಸಚಿವರ ಬಳಿ ಕರೆದೊಯ್ಯುವ ಭರವಸೆ ನೀಡಿದ್ದರು.