ಮಂಡ್ಯ: ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ದೂರದೃಷ್ಟಿ ಯೋಜನೆ ಸಹಕಾರಿಯಾಗಿದ್ದು, ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಪಿಡಿಒಗಳ ಭಾಗವಹಿಸುವಿಕೆ ಮುಖ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನಾ ಸಭೆ ಉದ್ಘಾಟಿಸಿ ಮಾತನಾಡಿದರು. ಗ್ರಾಮ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕಾರ ಗ್ರಾಪಂಗಳು ಹೊಸದಾಗಿ ರಚನೆಯಾದ ಬಳಿಕ ಮುಂದಿನ 5 ವರ್ಷಗಳಿಗೆ ದೂರದೃಷ್ಟಿ ಯೋಜನೆಯನ್ನು ಸಿದ್ಧಪಡಿಸಬೇಕಿದೆ. ಇದಕ್ಕಾಗಿ ಜನಪ್ರತಿನಿಧಿಗಳು ಹಾಗೂ ಜಿಪಂ ಅಧಿಕಾರಿಗಳು, ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ತರಬೇತಿ ಪಡೆಯುವ ಮೂಲಕ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಸಾಧಿಸಬೇಕಾಗಿರುವ ಗುರಿಗಳನ್ನು ನಿಗದಿಪಡಿಸಬೇಕು. ಮಾತ್ರವಲ್ಲದೆ, ಅವುಗಳನ್ನು ಸಮುದಾಯದ ಭಾಗವಹಿಸುವಿಕೆಯೊಂದಿಗೆ ಕಾರ್ಯರೂಪಕ್ಕೆ ತರುವ ಕಾರ್ಯಕ್ರಮವೇ ದೂರದೃಷ್ಟಿ ಯೋಜನೆ. ಇದೊಂದು ಬಹಳ ಉಪಯುಕ್ತ ಕಾರ್ಯಕ್ರಮ. ಇದನ್ನು ಕಾರ್ಯರೂಪಕ್ಕೆ ತರುವುದು ನಮ್ಮ ಕೈಯಲ್ಲಿಯೇ ಇರುತ್ತದೆ. ಗ್ರಾಮಗಳ ಅಭಿವೃದ್ಧಿಗೆ ಏನು ಮಾಡಬೇಕು ಎಂದು ಪಟ್ಟಿ ಮಾಡಿಕೊಂಡು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ಸೂಚಿಸಿದ ಸಚಿವರು, ಗ್ರಾಪಂ ಪಿಡಿಒಗಳು ಹಾಗೂ ಜನಪ್ರತಿನಿಧಿಗಳು ಗ್ರಾಮಸಭೆ ಮಾಡಿ, ಯಾವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬ ಬಗ್ಗೆ ಚರ್ಚೆ ಮಾಡಿ ಕಾರ್ಯಕ್ರಮ ರೂಪಿಸುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಿ ಎಂದು ಕಿವಿಮಾತು ಹೇಳಿದರು.
ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ ಮಾತನಾಡಿ, ಗ್ರಾಮೀಣ ಭಾಗದ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ದೂರದೃಷ್ಟಿ ಯೋಜನೆ ಜಾರಿಗೆ ಬಂದಿದೆ. ಈಗಾಗಲೇ ಜನಪ್ರತಿನಿಧಿಗಳು ಹಾಗೂ ಪಿಡಿಒಗಳಿಗೆ ತರಬೇತಿ ನೀಡಲಾಗಿದೆ. ಆರೋಗ್ಯ, ಶಿಕ್ಷಣ, ಬಡತನ, ಜೀವನೋಪಾಯ ನಿರ್ವಹಣೆ ಸೇರಿದಂತೆ 8 ವಲಯಗಳ 10 ಹಂತಗಳಲ್ಲಿ ಗ್ರಾಮಗಳ ಸಮಸ್ಯೆ ಗುರುತಿಸಲಾಗಿದೆ. ಅದರ ಆಧಾರದ ಮೇಲೆ ಗುರಿ ನಿಗದಿಪಡಿಸಿಕೊಂಡು ಗ್ರಾಮ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಮೂಲಕ ಕಾರ್ಯರೂಪಕ್ಕೆ ತರಬೇಕು ಎಂದರು.
ಗ್ರಾಮಸಭೆ ಅನುಮೋದಿತ ದೂರದೃಷ್ಟಿ ಯೋಜನೆಯನ್ನು ಪ್ರತಿ ಗ್ರಾಪಂಗೆ ಕಳುಹಿಸಿಕೊಡಬೇಕು. ಅನುಮೋದಿತ ದೂರದೃಷ್ಟಿ ಯೋಜನೆಯನ್ನು ಸರ್ಕಾರವು ನಿಗದಿಪಡಿಸಿರುವ ಪಂಚತಂತ್ರ 2.0 ತಂತ್ರಾಂಶದಲ್ಲಿ ಅಳವಡಿಸಬೇಕು. ಪ್ರತಿ 5 ಗ್ರಾಪಂಗೆ ತಲಾ ಒಬ್ಬರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಈಗಾಗಲೇ ಸಂಬಂಧಪಟ್ಟ ಬಹುತೇಕ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ತರಬೇತಿ ನೀಡಲಾಗಿದೆ. ಇನ್ನು ವಲಯವಾರು ಸಮಸ್ಯೆಗಳನ್ನು ಅರಿಯಲು ಕೇಂದ್ರೀಕೃತ ಗುಂಪು ಚರ್ಚೆಗಳನ್ನು ಕೈಗೊಳ್ಳಬೇಕು. ಇಲಾಖಾ ಅಧಿಕಾರಿಗಳು, ಚುನಾಯಿತ ಸದಸ್ಯರು, ಸಂಬಂಧಪಟ್ಟ ಉಪ ಸಮಿತಿಗಳ ಸದಸ್ಯರು, ವಿಷಯ ತಜ್ಞರು, ಸಂಬಂಧಿತ ವಿಷಯಾಧಾರಿತ ಸಿಬ್ಬಂದಿ, ಸ್ವ-ಸಹಾಯ ಸಂಘಗಳ ಸದಸ್ಯರು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಬೇಕು. ಈ ಮೂಲಕ ದೂರದೃಷ್ಟಿ ಯೋಜನಾ ತಯಾರಿಕಾ ಪ್ರಕ್ರಿಯೆಗೆ ಪೂರಕ ವಾತಾವರಣವನ್ನು ನಿರ್ಮಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಜಿಪಂ ಉಪ ಕಾರ್ಯದರ್ಶಿ(ಆಡಳಿತ) ಸರಸ್ವತಿ, ಉಪನಿರ್ದೇಶಕ ಪವನ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ಇತರರಿದ್ದರು. ಸಭೆಯ ಬಳಿಕ ಗ್ರಾಪಂ ಸದಸ್ಯರು ಹಾಗೂ ಪಿಡಿಒಗಳಿಗೆ ತರಬೇತಿ ಕಾರ್ಯಾಗಾರ ನಡೆಯಿತು.