ಪಿರಿಯಾಪಟ್ಟಣ: ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಅಧಿಕಾರಿಗಳಿಗೆ ತಾಲೂಕಿನಲ್ಲಿ ಜಾಗ ಇಲ್ಲ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಎಚ್ಚರಿಕೆ ನೀಡಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಕೆಲವು ಇಲಾಖೆಗಳಲ್ಲಿನ ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ನಿರ್ದಿಷ್ಟ ಸಮಯದಲ್ಲಿ ಮಾಡಿಕೊಡದೆ ಸತಾಯಿಸುವುದು, ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಅಧಿಕಾರಿಗಳು ಪ್ರಾಮಾಣಿಕವಾಗಿ ಜನರ ಸಮಸ್ಯೆ ಬಗೆಹರಿಸದಿದ್ದರೆ ನನಗೆ ದೂರು ಹೇಳುವುದು ಸಹಜ. ನನ್ನ ಬಳಿ ದೂರು ಬಾರದಂತೆ ಕರ್ತವ್ಯ ನಿರ್ವಹಿಸುವುದು ನಿಮ್ಮ ಜವಾಬ್ದಾರಿ ಎಂದರು.
ಪುರಸಭೆ ವ್ಯಾಪ್ತಿಯಲ್ಲಿನ ಸಾರ್ವಜನಿಕರಿಗೆ ಇ ಸ್ವತ್ತು, ಖಾತೆ ಇತರ ಕೆಲಸಗಳನ್ನು ನಿರ್ದಿಷ್ಟ ಸಮಯದಲ್ಲಿ ಮಾಡಿಕೊಡುತ್ತಿಲ್ಲವೆಂದರೆ ಇಲ್ಲಿನ ಸಿಬ್ಬಂದಿ ಕಾರ್ಯಕ್ಷಮತೆಯ ಬಗ್ಗೆ ಅನುಮಾನ ಮೂಡಿಸುತ್ತಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಸಾಧ್ಯವಿಲ್ಲದಿದ್ದರೆ ಬೇರೆಡೆಗೆ ವರ್ಗಾಯಿಸಿಕೊಂಡು ತೆರಳಿ ಎಂದು ತಾಕೀತು ಮಾಡಿದರು.
ಲಕ್ಷ್ಮೀಪುರ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಿಸಲು ಅವಕಾಶ ನೀಡಿದ್ದರೂ ಕೆಲವರು ಭೂಮಿ ಒತ್ತುವರಿ ಮಾಡಿಕೊಂಡು ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದು ನಿವಾಸಿ ಕುಮಾರ್ ದೂರಿದರು. ಇದಕ್ಕೆ ಉತ್ತರಿಸಿದ ಆರ್‌ಐ ಪಾಂಡುರಂಗ, ನಕ್ಷೆಯಂತೆ ಅಲ್ಲಿ ರಸ್ತೆ ಇದ್ದು, ಒತ್ತುವರಿ ತೆರವುಗೊಳಿಸುವುದಾಗಿ ತಿಳಿಸಿದರು.
ಪಟ್ಟಣದ ನಿವಾಸಿ ಅರುಣ್ ಮಾತನಾಡಿ, ಪುರಸಭೆಯಲ್ಲಿ ದಾಖಲೆ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ. ಇ ಸ್ವತ್ತು ದಾಖಲೆ ನೀಡಲು ಸತಾಯಿಸುತ್ತಿದ್ದಾರೆ ಎಂದು ಸಚಿವರಿಗೆ ದೂರು ನೀಡಿದರು.
ಇದರಿಂದ ಅಸಮಾಧಾನಗೊಂಡ ಸಚಿವರು, ಕಳೆದ ಅವಧಿಯಲ್ಲಿ ನಡೆಯುತ್ತಿದ್ದ ರೀತಿ ನೀವು ಕರ್ತವ್ಯ ನಿರ್ವಹಿಸಿದರೆ ನಾನು ಸುಮ್ಮನಿರುವುದಿಲ್ಲ. ಕಂದಾಯ ಪಾವತಿಸಿರುವವರ ಸಮಗ್ರ ದಾಖಲೆಯನ್ನೇ ಸರಿಯಾಗಿ ನಿರ್ವಹಿಸದೆ ಇರುವ ನಿಮ್ಮ ಈ ಧೋರಣೆ ಒಪ್ಪ ತಕ್ಕದ್ದಲ್ಲ. ಈ ಹಿಂದೆ ಹಣ ಕೊಟ್ಟವರ ಕೆಲಸ ಮಾಡುವ ಪದ್ಧತಿ ಇಟ್ಟುಕೊಂಡಿರುವ ನೀವು, ಸಾರ್ವಜನಿಕರ ಕೆಲಸಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಪಟ್ಟಣದ ಹೊಸ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ರಸ್ತೆಗಳು ಅಭಿವೃದ್ಧಿಯಾಗಿಲ್ಲ, ಮೂಲಸೌಲಭ್ಯಗಳ ಕೊರತೆ ಇದೆ ಎಂಬ ಬಗ್ಗೆ ಸಾರ್ವಜನಿಕರಿಂದ ವ್ಯಾಪಕವಾದ ದೂರುಗಳು ಕೇಳಿಬಂದವು. ಬಡಾವಣೆಯ ಅಭಿವೃದ್ಧಿಗಾಗಿ ಈಗಾಗಲೇ 1.30 ಕೋಟಿ ರೂ. ಗಳನ್ನು ನೀಡಿದ್ದು, ಏನು ಅಭಿವೃದ್ಧಿಯಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಪಟ್ಟಣದ ಅರಸಿನಕೆರೆ ಅಭಿವೃದ್ಧಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಅಭಿವೃದ್ಧಿ ಕೆಲಸಗಳ ಬಗ್ಗೆ ಸಾರ್ವಜನಿಕರು ಸೂಕ್ತ ಸಲಹೆ ನೀಡಬಹುದೆಂದು ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಹ್ಯಾರಿಸ್ ಸುಮೆರ್, ತಹಸೀಲ್ದಾರ್ ಕುಂಇ ಅಹ್ಮದ್, ತಾಪಂ ಇಒ ಸುನೀಲ್, ಆಶ್ರಯ ಸಮಿತಿ ಸದಸ್ಯ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ರಹಮತ್‌ಜಾನ್ ಬಾಬು, ಪುರಸಭೆ ಸದಸ್ಯರಾದ ರೇವತಿ, ಶಾಮ್, ಪ್ರಕಾಶ್, ರವಿ, ರತ್ನಮ್ಮ, ಮಾಜಿ ಸದಸ್ಯ ಪಿ.ಎಸ್.ವಿಷಕಂಠಯ್ಯ ಇತರರು ಹಾಜರಿದ್ದರು.