ಜಿಲ್ಲೆ

ಹೊಸ ವಿಶ್ವ ವಿದ್ಯಾಲಯ ಸ್ಥಾಪನೆ ಸಾಧ್ಯವಿಲ್ಲ : ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್‌

Uttara Kannada - Subash Hegde

ಕಾರವಾರ: ರಾಜ್ಯದಲ್ಲಿ ವಿಶ್ವ ವಿದ್ಯಾಲಯಗಳು ದೊಡ್ಡ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ಅವುಗಳ ಸುಧಾರಣೆಗೆ ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ನೇಮಕವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪ್ರಾರಂಭವಾದ ಕರ್ನಾಟಕ ರಾಜ್ಯ ದಂತ ವೈದ್ಯರ ಸಮಾವೇಶದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಈ ಹಿಂದೆ ವಿವಿಗಳ ಆಸ್ತಿಹಳು ಹಂಚಿಕೆ ಆದಂತೆ ಅವುಗಳ ಸಾಲ ಮತ್ತು ಜವಾಬ್ದಾರಿಗಳು ಹಂಚಿಕೆ ಆಗಿಲ್ಲ ಇದರಿಂದ ಹಾಗೂ ಇತರ ಹಲವು ಕಾರಣಗಳಿಗೆ ವಿಶ್ವವಿದ್ಯಾಲಯಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ವೇತನ ಕೊಡಲು, ಪಿಂಚಣಿ ನೀಡಲು ಸಾಧ್ಯವಾಗುತ್ತಿಲ್ಲ. ಪಿಂಚಣಿ ಕೊಡಲು ಧಾರವಾಡ ವಿವಿಯಲ್ಲಿ 140 ಕೋಟಿ ರೂ., ಮೈಸೂರಿನಲ್ಲಿ 110 ಕೋಟಿ ರೂ. ಮಂಗಳೂರಿನಲ್ಲಿ 65 ರಿಂದ 70 ಕೋಟಿ ರೂ. ಬೇಕಿದೆ. ಕಲಬುರಗಿ ವಿವಿಯಲ್ಲೂ ಸಮಸ್ಯೆ ಇದೆ. ಸಂಪುಟ ಉಪ ಸಮಿತಿ ಈ ಎಲ್ಲ ಅಂಶಗಳ ಅಧ್ಯಯನ ನಡೆಸುತ್ತಿದೆ. ಸಮಸ್ಯೆಗಳಿಗೆ ಪರಿಹಾರ ಹುಡುಲಾಗುವುದು ಎಂದರು.

ಉತ್ತರ ಕನ್ನಡಕ್ಕೆ ವಿಶ್ವ ವಿದ್ಯಾಲಯ ಇಲ್ಲ ಎಂಬ ಪ್ರಶ್ನೆ ಬಗ್ಗೆ ಮಾತನಾಡಿದ ಅವರು, ವಿಶ್ವವಿದ್ಯಾಲಯವನ್ನು ಭಾವನಾತ್ಮಕ ವಿಚಾರವಾಗಿ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಇದ್ದ ವಿವಿಗಳೇ ಆರ್ಥಿಕ ಸಮಸ್ಯೆ ಎದುರಿಸುತ್ತಿರುವುದರಿಂದ ರಾಜ್ಯದಲ್ಲಿ ಮತ್ತೆ ಹೊಸ ವಿವಿ ಪ್ರಾರಂಭಿಸಲು ಕಷ್ಟ. ಅಧ್ಯಯನ ಕೇಂದ್ರ(ಪಿಜಿ ಸೆಂಟರ್)ಗಳನ್ನು ತೆರೆಯಬಹುದು. ಹಳೆಯದಾದ ಮಾನ್ಯತೆ ಇರುವ ವಿಶ್ವವಿದ್ಯಾಲಯಗಳ ಪ್ರಮಾಣ ಪತ್ರಕ್ಕೆ ಬೆಲೆ ಸಿಗುತ್ತದೆ. ಹೊಸ ವಿಶ್ವವಿದ್ಯಾಲಯಗಳನ್ನು ಹೊಸದಾಗಿ ಬೆಳೆಸಬೇಕಾಗುತ್ತದೆ ಎಂದರು.

6 ಸಾವಿರ ಹುದ್ದೆ ನೇಮಕ:

ಕಾಲ ಕಾಲಕ್ಕೆ ಪದವಿ ಕಾಲೇಜ್‌ಗಳಲ್ಲಿ ಬೋಧಕ ಹುದ್ದಗಳ ನೇಮಕಾತಿ ಆಗಿಲ್ಲ. ಇದರಿಂದ ಸಮಸ್ಯೆ ಆಗುತ್ತಿದೆ. ಪ್ರಸ್ತುತ ಇಲಾಖೆಯ ವಿವಿಧ ಕಾಲೇಜ್‌ಗಳಲ್ಲಿ 6,700 ಬೋಧಕ ಹಾಗೂ ಬೋಧಕೇತರ ಕಾಯಂ ನೌಕರರಿದ್ದಾರೆ. ಶೇ.60ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ. ಹಾಗಾಗಿ 11,200ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನು ಬಳಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದೇವೆ.

ಸಿಎಂ ಅವರು ಆಯವ್ಯಯದಲ್ಲಿ ಎರಡು ಸಾವಿರ ಹುದ್ದೆ ಘೋಷಣೆ ಮಾಡಿದ್ದಾರೆ. ಒಟ್ಟು ಆರು ಸಾವಿರ ಹುದ್ದೆ ಮಂಜೂರು ಮಾಡುವಂತೆ ಕೇಳಿದ್ದೇವೆ. ಹಣಕಾಸು ಇಲಾಖೆ ಜತೆ ಚರ್ಚೆ ನಡೆಸಿದ್ದು, ಶೀಘ್ರ ಎಲ್ಲದಕ್ಕೂ ಪರಿಹಾರ ಹುಡುಕುತ್ತೇವೆ ಎಂದರು.

ಕ್ರಾಂತಿ ಅಲ್ಲ ಬ್ರಾಂತಿ

ರಾಜ್ಯ ಅಧಿಕಾರ ಹಂಚಿಕೆ ವಿಚಾರ ಮಾತನಾಡಿದ ಸಚಿವ ಎಂ.ಸಿ.ಸುಧಾರಕ ಅವರು ಸರ್ಕಾರ ಸುಭದ್ರವಾಗಿದೆ. ಮುಖ್ಯಮಂತ್ರಿ ಹುದ್ದೆ ಬಹಳ ಮಹತ್ವ ಇರುವ ಸ್ಥಾನವಾಗಿದೆ ಹಾಗಾಗಿ ಎಲ್ಲರೂ ಆ ಹುದ್ದೆ ಬಯಸುವುದು ಸಹಜ.ಆದರೆ, ಸಿಎಂ ಹುದ್ದೆ ಖಾಲಿ ಇಲ್ಲ. ದಲಿತ ಸಿಎಂ ವಿಚಾರ ಕೂಡ ತಪ್ಪಲ್ಲ. ಆದರೆ, ಅಂತಿಮವಾಗಿ ಹೈ ಕಮಾಂಡ್ ತೀರ್ಮಾನವೇ ಅಂತಿಮ ಎಂದರು. ನವೆಂಬರ್ ಕ್ರಾಂತಿ ಏನಿಲ್ಲ. ಅದು ಬರೀ ಬ್ರಾಂತಿ. ಕಾಂಗ್ರೆಸ್ ಹೈಕಮಾಂಡ್ ನಿಲುವಿಗೆ ಎಲ್ಲರೂ ಬದ್ಧ ಎಂದರು.

ಆರ್‌ಎಸ್‌ಎಸ್ ನಿಷೇಧ ವಿಚಾರ ಮಾತನಾಡಿದ ಸಚಿವರು, ಆರ್‌ಎಸ್‌ಎಸ್ ಅಥವಾ ಇನ್ಯಾವುದೇ ಸಂಘಟನೆ ಗುರಿಯಾಗಿಟ್ಟುಕೊಂಡು ಆದೇಶ ಮಾಡಿರುವುದು ಅಲ್ಲ. ಸರ್ಕಾರಿ ಸ್ಥಳದಲ್ಲಿ ಯಾವುದೇ ಕಾರ್ಯಕ್ರಮ ಮಾಡಬೇಕಿದ್ದರೂ ಅನುಮತಿ ಪಡೆಯಬೇಕು ಎಂಬ ಆದೇಶ ಹಿಂದೆಯೇ ಇತ್ತು. ಅದನ್ನೇ ಪ್ರಿಯಾಂಕ ಖರ್ಗೆ ಅವರು ಸಿಎಂ ಅವರಿಗೆ ಪತ್ರ ಬರೆದಿದ್ದರು. ಅದನ್ನು ತಪ್ಪಾಗಿ ಅರ್ಥೈಸಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಸುಮ್ಮನೇ ಇದಕ್ಕೆ ರಾಜಕೀಯ ಲೇಪನ ಕೊಡುವ ಕೆಲಸ ಆಗಿದೆ. ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎಂಬ ಪ್ರಯತ್ನದ ಭಾಗ ಅಷ್ಟೇ ಎಂದರು.