ಕಾರವಾರ: ಅಧಿಕೃತ ರಜೆ ಪಡೆಯದೇ ಹೋದ 24 ವೈದ್ಯರ ವಿರುದ್ಧ ಕಾನೂನು ಸಲಹೆ ಪಡೆದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಡಿಎಚ್‌ಒ ಡಾ.ನೀರಜ್ ಬಿ.ವಿ.ಅವರಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ಮತನಾಡಿದ ಅವರು, ಸರ್ಕಾರಿ ಕೋಟಾದಡಿ ಆಯ್ಕೆಯಾಗುವ ಪ್ರತಿ ವೈದ್ಯ ವಿದ್ಯಾರ್ಥಿಗೆ ಸರ್ಕಾರ 4 ವರ್ಷಕ್ಕೆ 2 ಕೋಟಿ ಖರ್ಚು ಮಾಡುತ್ತದೆ. ನಂತರ ಕಡ್ಡಾಯ ಗ್ರಾಮೀಣ ಸೇವೆಯಡಿ ಅವರನ್ನು ನಿಯೋಜಿಸಿ ಮಾಸಿಕ 62 ಸಾವಿರ ರೂ. ವೇತನ ನೀಡಲಾಗುತ್ತದೆ. ಆದರೂ ಸರಿಯಾಗಿ ಗ್ರಾಮೀಣ ಭಾಗ ಜನರಿಗೆ ಸೇವೆ ಸಲ್ಲಿಸಲು ಸಾಧ್ಯವಾಗುವುದಿಲ್ಲ ಎಂದರೆ ಅವರ ಮೇಲೆ ಕಠಿಣ ಕ್ರಮ ಅನಿವಾರ್ಯ ಎಂದರು. ಜಿಲ್ಲೆಯ 8 ಪಿಎಚ್‌ಸಿಗಳಲ್ಲಿ ವೈದ್ಯರಿಲ್ಲ. ಕಡ್ಡಾಯ ಗ್ರಾಮೀಣ ಸೇವೆಯಡಿ 61 ವೈದ್ಯರು ಬಂದಿದ್ದು, ಅದರಲ್ಲಿ 24 ಜನ ಹೇಳದೇ ಕೇಳದೇ ಊರು ಬಿಟ್ಟಿದ್ದಾರೆ ಎಂದು ಎಚ್‌ಒ ನೀರಜ್ ಸಭೆಗೆ ಮಾಹಿತಿ ನೀಡಿದರು.
ಕಾರವಾರ ಮೆಡಿಕಲ್ ಕಾಲೇಜ್‌ನ ಜತೆ 150 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 450 ಹಾಸಿಗೆಗಳ ಕಟ್ಟಡ ಕಾಮಗಾರಿ ಮಾರ್ಚ್ಗೆ ಮುಗಿಯಬೇಕಿತ್ತು. ಆದರೆ, ಇದುವರೆಗೂ ಮುಗಿಸದ ಕಾರಣ ಇಂಜಿನಿಯರ್ ಶ್ರೀನಿವಾಸ್ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವ ವೈದ್ಯ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದರು. ಜಿಲ್ಲೆಯ ಉಳಿದೆಡೆ ನಡೆಯುತ್ತಿರುವ ಆಸ್ಪತ್ರೆ ಕಟ್ಟಡ ಕಾಮಗಾರಿಗಳನ್ನೂ ಅವಽಯೊಳಗೇ ಮುಗಿಸುವಂತೆ ಸೂಚಿಸಿದರು.
ಭಟ್ಕಳ, ಬನವಾಸಿ ಸೇರಿ ಜಿಲ್ಲೆಯ ವಿವಿಧೆಡೆ ವಿದ್ಯುತ್ ಗ್ರಿಡ್ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಆಕ್ಷೇಪಿಸಿದ ಸಚಿವರು ಇಇ ವಿ.ಸುನೀಲ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಜಿಪಂ ಸಿಇಒ ಈಶ್ವರ ಕಾಂದೂ, ಎಡಿಸಿ ಪ್ರಕಾಶ ರಜಪೂರ ವೇದಿಕೆಯಲ್ಲಿದ್ದರು.
ಕಾರವಾರದಿಂದ ಮಂಗಳೂರುವರೆಗೆ 370 ಕಿಮೀ ಕಡಲ ತೀರದಲ್ಲಿ ಎಲ್ಲೆಲ್ಲಿ ಅವಕಾಶವಿದೆ ಅಲ್ಲೆಲ್ಲ ಬಂದರು ಜಟ್ಟಿಗಳನ್ನು ಖಾಸಗಿಗೆ ವಹಿಸಲು ಯೋಜಿಸಲಾಗುವುದು. ಹಾಲಿ ಇರುವ ಬಂದರುಗಳಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುವುದು. ಬಂದರು ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ವಹಿಸಲಾಗುವುದು. ಕಾರವಾರ ಬಂದರಿನಲ್ಲಿ ಅನವಶ್ಯಕವಾಗಿ ಕೊಳೆಯುತ್ತಿರುವ ಗ್ರಾನೈಟ್, ವಿವಾದದಲ್ಲಿ ಬಿದ್ದ ಮ್ಯಾಂಗನೀಸ್ ಖಾಲಿ ಮಾಡಲು ಸೂಚಿಸಲಾಗಿದೆ.ಮಂಕಾಳ ಎಸ್.ವೈದ್ಯಬಂದರು ಸಚಿವ