ಜಿಲ್ಲೆ

ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ ಸಚಿವ ಮಧು ಬಂಗಾರಪ್ಪ

ಮೈಸೂರು: ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಶುಕ್ರವಾರ ನಮಾಜ್ ಮಾಡಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಬದಲಾಯಿಸಿದೆ ಎಂಬ ಆರೋಪವನ್ನು ಅಲ್ಲಗಳೆದಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅವನ್ಯಾರೋ ಚಕ್ರವರ್ತಿ ಸೂಲಿಬೆಲೆ ಅಂತೆ, ತಲೆಹರಟೆ. ಅವನಿಗೆ ಮಾನ ಮರ್ಯಾದೆ ಇಲ್ಲ, ಶುಕ್ರವಾರ ನಮಾಜ್‌ಗೆ ಅವಕಾಶ ನೀಡಲು ಪರಿಕ್ಷಾ ವೇಳಾಪಟ್ಟಿ ಬದಲಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾನೆ. ಇದು ವಿಷ ಬೀಜ ಬೀತ್ತುವ ಕೆಲಸವಲ್ಲವೇ ಎಂದು ಪ್ರಶ್ನಿಸಿದರು.

ಕಾಮನ್‌ಸೆನ್ಸ್ ಇಲ್ಲದೆ ಏನೇನೋ ಹೇಳುತ್ತಾರೆ. ಯಾವುದೇ ವಿಚಾರವನ್ನು ಭಾವನಾತ್ಮಕ ಮಾಡಿದಷ್ಟೂ ನಿಮ್ಮನ್ನು ರಾಜ್ಯದ ಜನ ದೂರ ತಳ್ಳುತ್ತಾರೆ. ಸುಳ್ಳುಗಳನ್ನು ಬಿತ್ತುತ್ತಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸಾಕಷ್ಟು ದೂರುಗಳು ಬರುತ್ತಿವೆ. ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಪಿಯುಸಿ ಪರೀಕ್ಷೆಗಳು ಇರುವ ಕಾರಣಕ್ಕೆ ಸ್ಥಳ ಸರಿದೂಗಿಸಲು ಶುಕ್ರವಾರದ ಸಮಯ ಬದಲಾಗಿದೆ ಅಷ್ಟೆ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು, ಅವರಿಗೆ ಇದೆಲ್ಲ ಗೊತ್ತಾಗಬೇಕಿತ್ತು. ಯಾವುದೋ ಮೂಲೆಯಲ್ಲಿ ಕುಳಿತು ಟ್ವೀಟ್ ಮಾಡುವುದು ಸರಿಯಲ್ಲ. ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಚುನಾವಣೆ ಗೆಲ್ಲಲು ಆಗುವುದಿಲ್ಲ. ಅದಕ್ಕೆ ವಿಧಾನಸಭೆ ಚುನಾವಣೆ ಫಲಿತಾಂಶ ಸಾಕ್ಷಿಯಾಗಿದೆ ಎಂದರು.

ಎಸ್ಸೆಸ್ಸೆಲ್ಸಿ, ಪಿಯುಸಿ ಪರಿಕ್ಷಾ ಪದ್ಧತಿಯಲ್ಲಿ ಬದಲಾವಣೆ ತರುತ್ತಿದ್ದೇವೆ. ಒಮ್ಮೆ ಅನುತ್ತೀರ್ಣರಾದ ನಂತರ ಸಂಪ್ಲಿಮೆಂಟರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರಿಗೆ ಅಂಕಪಟ್ಟಿ ನೀಡುವಾಗ ಸಪ್ಲಿಮೆಂಟರಿ ಎಂದು ನಮೂದಿಸುವುದಿಲ್ಲ. ಶಾಲಾ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ, ಚಿಕ್ಕಿ ನೀಡಲಾಗುತ್ತಿದೆ. ಆರು ದಿನ ಕ್ಷೀರಭಾಗ್ಯ ಹಾಲು, ಮೂರು ದಿನ ಹಾಲಿಗೆ ರಾಗಿಮಾಲ್ಟ್ ಮಿಕ್ಸ್ ಮಾಡಿ ಕೊಡಲಾಗುವುದು ಎಂದು ಹೇಳಿದರು.