ವಿಜಯಪುರ ಜಿಪಂ ಸಭಾಂಗಣದಲ್ಲಿ ಸಚಿವ ಎಂ.ಬಿ. ಪಾಟೀಲರು ಬರ ನಿರ್ವಹಣೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.  
ಜಿಲ್ಲೆ

ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ ಖಂಡನೆ, ಸಂವಿಧಾನ ಬದಲಿಸುವ ಹುನ್ನಾರ ಸಹಿಸಲ್ಲ ಎಂದ ಸಚಿವ ಎಂ.ಬಿ. ಪಾಟೀಲ

ವಿಜಯಪುರ: ಜಾತ್ಯತೀತ ಹಾಗೂ ಸಮಾಜವಾದಿ ಪರಿಕಲ್ಪನೆಯಡಿ ರಚನೆಯಾದ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನವನ್ನು ಬದಲಿಸಲಿ ಮತ್ತೆ ಮನುಸ್ಮತಿ ಜಾರಿಗೆ ತರುವ ಹುನ್ನಾರ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದ ನಡೆದಿದ್ದು, ಇದನ್ನು ಖಂಡಿಸುವುದಾಗಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು.

ಈ ಹಿಂದೆ ಅನಂತಕುಮಾರ ಹೆಗಡೆ ಕೇಂದ್ರ ಸಚಿವರಾಗಿದ್ದಾಗ ‘ನಾವು ಅಧಿಕಾರಕ್ಕೆ ಬಂದಿದ್ದೇ ಸಂವಿಧಾನ ಬದಲಿಸಲು’ ಎಂದಿದ್ದರು. ಇದೀಗ ದತ್ತಾತ್ರೇಯ ಹೊಸಬಾಳೆ ಅವರು ಮಾಜವಾದಿ ಮತ್ತು ಜಾತ್ಯತೀತ ಪದ ತೆಗೆದು ಹಾಕಬೇಕೆಂದಿದ್ದಾರೆ. ಸಂವಿಧಾನ ಬದಲಿಸುವ ಹುನ್ನಾರ ಹೊರಬಿದ್ದಿದೆ ಎಂದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂವಿಧಾನದ ಆಶಯ, ಸಿದ್ಧಾಂತ ಮತ್ತು ಅಂಬೇಡ್ಕರ್ ಅವರ ವಿಚಾರಗಳಿಗೆ ವಿರುದ್ಧವಾಗಿದೆ. ಡಾ.ಅಂಬೇಡ್ಕರ್ ಅವರು ಇದೊಂದು ಪ್ರಜಾಪ್ರಭುತ್ವ ರಾಷ್ಟ್ರ ಹಾಗೂ ಜಾತ್ಯತೀತ ರಾಷ್ಟ್ರವನ್ನಾಗಿಸಿದ್ದಾರೆ. ಹೀಗಾಗಿ ಇವರಿಗೆ ಸಹಿಸಲಾಗುತ್ತಿಲ್ಲ. ಭಾರತವನ್ನು ಕೋಮುವಾದಿ ರಾಷ್ಟ್ರ ಮಾಡಲು ಹೊರಟಿದ್ದಾರೆ. ಸಂವಿಧಾನ ಬದಲಿಸುವ ಹುನ್ನಾರ ಸಹಿಸಲ್ಲ ಎಂದರು.