ರಾಯಚೂರು ನಗರದ ಕೇಂದ್ರ ಗ್ರಂಥಾಲಯ ಕಟ್ಟಡದ ಆವರಣದಲ್ಲಿ ರಾಯಚೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಸೆಲ್ಕೋ ಫೌಂಡೇಶನ್‌ನ ಸಹಭಾಗಿತ್ವದ ಸೋಲಾರ್ ಕೂಲ್ ಕಾರ್ಟ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಬುಧವಾರ ಫಲಾನುಭವಿಗಳಿಗೆ ವಿತರಿಸಿದರು.
ನಂತರ ಅವುಗಳ ಬಳಕೆ ಮತ್ತು ಸೋಲಾರ್ ಕೂಲ್ ಕಾರ್ಟ್‌ಗಳಲ್ಲಿನ ತರಕಾರಿ ಮಾರಾಟದಿಂದ ಆಗುವ ಲಾಭ ನಷ್ಟಗಳ ಬಗ್ಗೆ ಸಚಿವರು ಫಲಾನುಭವಿಗಳಿಗೆ ವಿಚಾರಿಸಿ ಮಾಹಿತಿ ಪಡೆದುಕೊಂಡರು. ಈ ಸೋಲಾರ್ ಕೂಲ್ ಕಾರ್ಟ್‌ಗಳು ಸೌರ ಬ್ಯಾಟರಿ ಮತ್ತು ಸೌರ ಪ್ರತಿಫಲಕ ಫಿಟ್ಟಿಂಗ್‌ಗಳೊಂದಿಗೆ ಬರುತ್ತವೆ. ಹಣ್ಣುಗಳು ಮತ್ತು ತರಕಾರಿಗಳ ಜೀವಿತಾವಧಿಯನ್ನು ಶೇಕಡಾ 70 ರಷ್ಟು ಹೆಚ್ಚಿಸುತ್ತವೆ.
ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಬಿಸಿ ವಾತಾವರಣದಲ್ಲಿ ಹಣ್ಣುಗಳು, ಹೂವುಗಳು ಮತ್ತು ತರಕಾರಿಗಳು ವಿಶೇಷವಾಗಿ ಬೇಸಿಗೆಯಲ್ಲಿ ಬಹಳ ಬೇಗನೆ ಕೆಡುವ ಅಥವಾ ಹಳಸುವ ಬೀತಿಯಿದ್ದು, ಈ ಸಮಸ್ಯೆಯನ್ನು ನಿವಾರಿಸಲು ಕೂಲ್ ಕಾರ್ಟ್ ಸಹಾಯವಾಗುತ್ತದೆ. ಈ ಹೊಸ ಪ್ರಯೋಗವು ಮುಂದಿನ 1 ರಿಂದ 2 ತಿಂಗಳವರೆಗೆ ಯಶಸ್ವಿಯಾದರೆ ಮಹಾನಗರ ಪಾಲಿಕೆಯ ವ್ಯಾಪ್ತಿಯ ಆಸಕ್ತ ಬೀದಿ ವ್ಯಾಪಾರಿಗಳಿಗೆ ಈ ಹೊಸ ಕೂಲ್ ಕಾರ್ಟ್‌ಗಳನ್ನು ಖರೀದಿಸಲು ಸಹಾಯ ಧನ ಮತ್ತು ಅಗ್ಗದ ಸಾಲಗಳನ್ನು ಒದಗಿಸಲು ಅನುಕೂಲ ಮಾಡಿಕೊಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು,ಪಾಲಿಕೆಯ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಸದಸ್ಯ ಜಯಣ್ಣ, ಜಿಲ್ಲಾಧಿಕಾರಿ ನಿತೀಶ್ ಕೆ., ಎಸಿ ಗಜಾನನ ಬಾಳೆ, ಪಿಡಿ ಈರಣ್ಣ, ಎಎಸ್ಪಿ ಕುಮಾರಸ್ವಾಮಿ, ಪಾಲಿಕೆ ಆಡಳಿತ ಉಪ ಆಯುಕ್ತ ಸಂತೋಷ ರಾಣಿ ಸೇರಿದಂತೆ ಅನೇಕರು ಇದ್ದರು.