ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆಯಲ್ಲಿ ಹೊರಬಂದರು ಹಾಗೂ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಮರು ನಿಮಾರ್ಣ ಕೈಗೊಳ್ಳಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದರು.
ಉಡುಪಿಯ ಜಿಪಂ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಂಗೊಳ್ಳಿ ಮೀನುಗಾರಿಕಾ ಬಂದರು ಹಾಗೂ ಕೋಡಿ ಜೆಟ್ಟಿಯಲ್ಲಿ (ನ್ಯಾವಿಗೇಷನ್ ಚಾನೆಲ್) ಬಂದರು ಇಲಾಖೆ ಹಾಗೂ ಸಿಆರ್ಜೆಡ್ ಸಮನ್ವಯದೊಂದಿಗೆ ಹೂಳೆತ್ತುವ ಕಾಮಗಾರಿ ನಿರ್ವಹಿಸಲು ಸೂಚನೆ ನೀಡಿದ್ದಾಗಿ ತಿಳಿಸಿದರು.
- ಹಲಗೆ ಅಳವಡಿಸಲು ಸೂಚನೆ: ಜಿಲ್ಲೆಯಲ್ಲಿ 604 ಕಿಂಡಿ ಅಣೆಕಟ್ಟುಗಳಿದ್ದು, 357 ಕಿಂಡಿ ಅಣೆಕಟ್ಟುಗಳಿಗೆ ತಡೆ ಹಲಗೆ ಅಳವಡಿಸಲಾಗಿದೆ. ಬಾಕಿ ಉಳಿದಿರುವ 343 ಕಿಂಡಿ ಅಣೆಕಟ್ಟುಗಳಿಗೂ ಮುಂದಿನ 15 ದಿನದೊಳಗೆ ತಡೆ ಹಲಗೆ ಅಳವಡಿಸಲು ಸೂಚಿಸಿದ್ದೇನೆ. ಉಪ್ಪು ನೀರು ಸಿಹಿ ನೀರಿಗೆ ಸೇರ್ಪಡೆ ಆಗುವುದನ್ನು ತಡೆಯುವ ಖಾರ್ ಲ್ಯಾಂಡ್ ನಿಮಾರ್ಣದ 11 ಕಾಮಗಾರಿಯ ಇಐಎ ವರದಿಯನ್ನು ಪ್ರಾದೇಶಿಕ ನಿರ್ದೇಶಕರು (ಪರಿಸರ) ಉಡುಪಿ ಇವರಿಂದ ಅನುಮೋದನೆ ಪಡೆದ ಕಾಮಗಾರಿಯನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ತಿಳಿಸಿದ್ದೇನೆ ಎಂದರು.
- ವಾರಾಹಿ ಯೋಜನೆ: ನಗರೋತ್ಥಾನ ನಾಲ್ಕನೇ ಹಂತದಲ್ಲಿ ಅನುಮೋದನೆಯಾದ 71 ಕಾಮಗಾರಿಗಳಲ್ಲಿ 32 ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಹೇಳಿದ್ದೇನೆ. ಉಡುಪಿ ನಗರಕ್ಕೆ ಪೂರೈಸುವ ವಾರಾಹಿ ಕುಡಿಯುವ ನೀರಿನ ಯೋಜನೆಯನ್ನು ಫೆಬ್ರವರಿಯಲ್ಲಿ ಪೂರ್ಣಗೊಳಿಸಲು ಆದೇಶಿಸಿದ್ದೇನೆ. ಡೀಮ್ಡ್ ಫಾರೆಸ್ಟ್ ವಿಚಾರವಾಗಿ ಸಮಸ್ಯೆ ಉಂಟಾಗಿದ್ದು, ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಯೋಜನೆ ಪೂರ್ಣಗೊಳಿಸಲು ಗೃಹ ಲಕ್ಷ್ಮಿ ಅದಾಲತ್
ಜಿಲ್ಲೆಯಲ್ಲಿ 3.12 ಲಕ್ಷ ಕುಟುಂಬಗಳಿದ್ದು, ಈ ಪೈಕಿ 1,83,072 ಕುಟುಂಬದ ಯಜಮಾನಿಯರು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಅಲ್ಲದೆ, ಜಿಲ್ಲೆಯಲ್ಲಿರುವ ಕೊರಗ ಹಾಗೂ ಮಲೆಕುಡಿಯ ಜನಾಂಗದವರಿು ಈ ಯೋಜನೆ ತಲುಪಬೇಕಿದೆ, ಹೀಗಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ "ಗೃಹಲಕ್ಷ್ಮಿ ಅದಾಲತ್' ವಿಶೇಷ ಅಭಿಯಾನ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಯಾವುದೇ ಕುಟುಂಬಕ್ಕೂ ಈ ಯೋಜನೆ ಕೈತಪ್ಪದಂತೆ ನೋಡಿಕೊಳ್ಳಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ ಎಂದು ಸಚಿವೆ ತಿಳಿಸಿದರು. ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಜಿಪಂ ಸಿಇಒ ಪ್ರಸನ್ನ ಎಚ್. ಇದ್ದರು.