ಜಿಲ್ಲೆ

ಮಳೆಗಾಲ ಎದುರಿಸಲು ಸರ್ವ ಸನ್ನದ್ಧರಾಗಿ...

ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಸೂಚನೆ

ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ

* ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸಂಭವ * ಮುಂಜಾಗ್ರತೆಗೆ ಟಾಸ್ಕ್ ಫೋರ್ಸ್ ರಚಿಸಲು ಆದೇಶ

ವಿಜಯವಾಣಿ ಸುದ್ದಿಜಾಲ ಉಡುಪಿ

ಕಳೆದ ವರ್ಷದಂತೆ ಈ ವರ್ಷವೂ ಸಹ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಯಾವುದೇ ಪ್ರಾಣಹಾನಿ, ಆಸ್ತಿ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಟಾಸ್ಕ್ ಫೋರ್ಸ್ ರಚಿಸಿ ಸನ್ನದ್ಧರಾಗಿ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಉಡುಪಿ ಜಿಪಂನ ಡಾ.ವಿ.ಎಸ್​. ಆಚಾರ್ಯ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮೇ 11ರಂದು ಬೆಳಗ್ಗೆ ವಿಶೇಷ ಸಭೆ ನಡೆಸಿದ ಅವರು, ಮಳೆಗಾಲ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಸಲಹೆ-ಸೂಚನೆ ನೀಡಿ ಮಾತನಾಡಿದರು.

ಅಪಾಯಕಾರಿ ಮರ ತೆರವುಗೊಳಿಸಿ

ನಗರದಲ್ಲಿ ಸಣ್ಣ ಮಳೆಯಾದರೂ ಸಮಸ್ಯೆಯಾಗುತ್ತಿದ್ದು, ಎಲ್ಲ ಇಲಾಖೆಗಳು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು. ಅರಣ್ಯ ಇಲಾಖೆಯವರು ಅಪಾಯಕಾರಿ ಗಿಡ-ಮರಗಳಿದ್ದಲ್ಲಿ ತೆರವುಗೊಳಿಸಬೇಕು. ಮೆಸ್ಕಾಂನವರು ವಿದ್ಯುತ್​ ಕಂಬ ಹಾಗೂ ತಂತಿಗಳ ಬದಲಿಸುವಿಕೆ ಇದ್ದರೆ ಮಳೆಗಾಲದ ಮೊದಲೇ ಮಾಡಬೇಕು. ಅಗತ್ಯ ಇರುವೆಡೆ ಕಾಲುಸಂಕ ನಿರ್ಮಾಣಕ್ಕೆ ಮುಂದಾಗಬೇಕು. ಮಳೆಗಾಲ ನಿರ್ವಹಣೆಗೆ ಸಂಬಂಧಿಸಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ವಿಡಿಯೋ ಕಾನ್ಫರೆನ್ಸ್​ ಮೂಲಕ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.

ವಿವಿಧ ಸೌಲಭ್ಯ ವಿತರಣೆ

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ ಹೊಲಿಗೆ ಯಂತ್ರ, ಬ್ಯಾಗ್​ ಹಾಗೂ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಇದೇ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್​ ವರಿಷ್ಠ ಡಾ. ಕೆ.ಅರುಣ, ಜಿಪಂ ಸಿಇಒ ಪ್ರತೀಕ ಬಾಯಲ್​, ಜಿಲ್ಲಾ ಅರಣ್ಯಾಧಿಕಾರಿ ಗಣಪತಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕಚೇರಿಯಲ್ಲೇ ಕುಳಿತು ವರದಿ ಮಾಡಬೇಡಿ

ಜಿಲ್ಲೆಯ ಕೇವಲ 3 ಗ್ರಾಮಗಳಲ್ಲಿ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ತ್ವರಿತವಾಗಿ ಅಗತ್ಯಕ್ರಮ ಕೈಗೊಳ್ಳಬೇಕು. ಅಂಗನವಾಡಿ, ಶಾಲೆಗಳ ಕಟ್ಟಡ ಪರಿಸ್ಥಿತಿ ಹೇಗಿದೆಯೆಂದು ಮೊದಲೇ ಪರಿಶೀಲಿಸಿ ಅಪಾಯವಾಗದಂತೆ ಎಚ್ಚರವಹಿಸಬೇಕು. ಕೇವಲ ಕಚೇರಿಯಲ್ಲಿ ಕುಳಿತು ವರದಿ ಮಾಡದೆ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಪರಿಶೀಲಿಸಿ, ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವೆ ಹೆಬ್ಬಾಳ್ಕರ್​ ಆದೇಶಿಸಿದರು.