ಜಿಲ್ಲೆ

ಫೋಬಿಯಾದಿಂದ ನರಳುತ್ತಿರುವ ಸಚಿವ ಲಾಡ್

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂತಹ ದೊಡ್ಡವರ ಬಗ್ಗೆ ಮಾತನಾಡಿದರೆ ತಾನು ಸಹ ದೊಡ್ಡ ವ್ಯಕ್ತಿಯಾಗುತ್ತೇನೆಂಬ ಭ್ರಮೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರದ್ದು. ಫೋಬಿಯಾ ಮತ್ತು ನಾಕೋಸಿಟಿಕ್ ಪರ್ಸನಾಲಿಟಿಯಂತೆ ಅವರು ಪ್ರಧಾನಿ ಮೋದಿ ಬಗ್ಗೆ ಮನಬಂದಂತೆ ಮಾತನಾಡುತ್ತಾರೆ. ಅವರ ಮಾತುಗಳಿಗೆ ಕಿವಿಗೊಡುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ತಿರಂಗಾ ಯಾತ್ರೆ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಸೇರಿ ಹಲವು ಹಿರಿಯ ಕಾಂಗ್ರೆಸ್ ನಾಯಕರು ಆಪರೇಷನ್ ಸಿಂಧೂರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಸಚಿವ ಸಂತೋಷ ಲಾಡ್ ಅವರಂಥ ರಾಜ್ಯದ ಕೆಲವು ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ಅವರನ್ನು ಟೀಕಿಸುತ್ತಿದ್ದಾರೆ ಎಂದರು.

ಲಾಡ್ ಅವರು ಪ್ರಧಾನಿ ಅವರನ್ನು ಟೀಕಿಸುವುದನ್ನು ಬಿಟ್ಟು ತಮ್ಮ ಇಲಾಖೆಯತ್ತ ಮೊದಲು ಗಮನ ಹರಿಸಲಿ. ಕಾರ್ವಿುಕ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅವರು ಉಸ್ತುವಾರಿ ವಹಿಸಿರುವ ಧಾರವಾಡ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ತಟಸ್ಥಗೊಂಡಿವೆ ಎಂದು ಆರೋಪಿಸಿದರು.

ದೊಡ್ಡ ವ್ಯಕ್ತಿಗಳ ಬಗ್ಗೆ ಮಾತನಾಡಿದರೆ ತಾವು ಸಹ ದೊಡ್ಡವರಂತೆ ಕಾಣಿಸಿಕೊಳ್ಳುತ್ತೇವೆ ಎಂಬ ಫೋಬಿಯಾದಲ್ಲಿ ಸಚಿವ ಸಂತೋಷ ಲಾಡ್ ಅವರಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಎಷ್ಟು ಉಗ್ರ ದಾಳಿಗಳು ನಡೆದಿದ್ದವು ಎಂಬುದನ್ನು ಸಚಿವ ಲಾಡ್ ಮೊದಲು ಅರಿತುಕೊಳ್ಳಲಿ ಎಂದರು.

ಉಗ್ರರ ತಾಣಗಳು ಜನವಸತಿ ಪ್ರದೇಶದಲ್ಲಿದ್ದರೂ, ಕೇವಲ ಉಗ್ರರ ತಾಣಗಳನ್ನೇ ಗುರಿಯಾಗಿಸಿ ದಾಳಿ ಮಾಡಿ, ಅವುಗಳನ್ನು ನಾಶಪಡಿಸಲಾಗಿದೆ. ಇದು ನಮ್ಮ ದೇಶದ ಗುಪ್ತಚರ ಇಲಾಖೆ, ವಾಯು ದಳ, ನೌಕಾಪಡೆ, ಭೂಸೈನ್ಯದ ಚಾಕಚಕ್ಯತೆಗೆ ಹಿಡಿದ ಕನ್ನಡಿ. ದೇಶದ ಸೈನ್ಯದ ಬಗ್ಗೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ ಎಂದರು.

ಕಾಂಗ್ರೆಸ್ ನಾಯಕರು ನಮ್ಮ ಸೈನ್ಯವನ್ನು ನಂಬುವುದಿಲ್ಲ. ಸೈನ್ಯ ಪಾಕಿಸ್ತಾನದ ಉಗ್ರರ ತಾಣಗಳ ಮೇಲೆ ದಾಳಿ ನಡೆಸಿದಾಗ ಸಾಕ್ಷಿ ಕೇಳುವ ಕಾಂಗ್ರೆಸ್ ಮುಖಂಡರು, ಚುನಾವಣೆೆಯಲ್ಲಿ ಸೋತಾಗ ಚುನಾವಣೆ ಪ್ರಕ್ರಿಯೆ ಟೀಕಿಸುತ್ತಾರೆ. ತಮ್ಮ ವಿರುದ್ಧ ತೀರ್ಪು ಬಂದರೆ ಸುಪ್ರೀಂ ಕೋರ್ಟ್ ಟೀಕಿಸುತ್ತಾರೆ. ಕಾಂಗ್ರಸ್ ಮುಖಂಡರಿಗೆ ರಾಷ್ಟ್ರಪತಿ ಅವರಲ್ಲೂ ನಂಬಿಕೆ ಇಲ್ಲ ಎಂದು ಕಿಡಿ ಕಾರಿದರು.