ಹುಬ್ಬಳ್ಳಿ: ಕೇಂದ್ರ ಸರ್ಕಾರ ಮಾಡಿದ ಭ್ರಷ್ಟಾಚಾರ, ಅನ್ಯಾಯದ ಕುರಿತು ದಾಖಲೆಗಳನ್ನು ಇಡಲಾಗುವುದು. ಈ ಕುರಿತು ಚರ್ಚೆಗೆ ಬನ್ನಿ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಬಿಜೆಪಿಯವರಿಗೆ ಆಹ್ವಾನ ನೀಡಿದರು.
ಕರ್ನಾಟಕ ಸರ್ಕಾರ, ಧಾರವಾಡ ಜಿಲ್ಲಾಡಳಿತ, ಹು-ಧಾ ಮಹಾನಗರ ಪಾಲಿಕೆ ಆಶ್ರಯದಲ್ಲಿ ನಗರದ ರೈಲ್ವೆ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಗ್ಯಾರಂಟಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆಯಡಿ ಬಡವರಿಗೆ ಅಕ್ಕಿ ವಿತರಿಸುವ ಯೋಜನೆ ತಂದಿದೆ. ಬಿಜೆಪಿಯವರು ಇದನ್ನು ತಮ್ಮದು ಎನ್ನುತ್ತಿದ್ದಾರೆ. ಆರ್‌ಟಿಎ, ಆರ್‌ಟಿಇ, ನರೇಗಾದಂಥ ಮಹತ್ವದ ಯೋಜನೆ ಅನುಷ್ಠಾನಗೊಳಿಸಿದೆ. ಆದರೆ, ನರೇಗಾ ಯೋಜನೆಯನ್ನು ಮೊಟಕುಗೊಳಿಸಲು ಈಗಿನ ಕೇಂದ್ರ ಸರ್ಕಾರ ನಿರ್ಧರಿಸಿತು. ಮಹಿಳಾ ಮೀಸಲಾತಿ, ಪೆಟ್ರೋಲ್ ದರ ಇಳಿಕೆಯಂಥ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಯುಪಿಎ ಸರ್ಕಾರ ಎಂದರು.
ಗುಜರಾತ್‌ನ ಮುನ್ರಾ ಪೋರ್ಟ್‌ನಲ್ಲಿ 30 ಸಾವಿರ ಕೋಟಿ ರೂ. ಮೌಲ್ಯದ ಡ್ರಗ್ಸ್ ಸಿಕ್ಕಿದೆ. 2019-20ನೇ ಸಾಲಿನಲ್ಲಿ ದೇಶದಲ್ಲಿ 13 ಲಕ್ಷ 47 ಸಾವಿರ ಮಹಿಳೆಯರು ನಾಪತ್ತೆಯಾಗಿದ್ದಾರೆ. ಇದು ಎನ್‌ಸಿಆರ್‌ಬಿ ವರದಿಯಲ್ಲಿ ಉಲ್ಲೇಖವಾಗಿದೆ. 2 ಲಕ್ಷ 32 ಸಾವಿರ ಜನರು ಪಾಸ್‌ಪೋರ್ಟ್ ಮರಳಿಸಿದ್ದಾರೆ. 17 ಲಕ್ಷ ಜನರು ಬೇರೆ ದೇಶದ ಸಿಟಿಜನ್‌ಶಿಪ್ ಹೊಂದಿದ್ದಾರೆ. ಸರ್ಕಾರಿ ಸ್ವಾಮ್ಯದ 33 ಕಂಪನಿಗಳು ಬಾಗಿಲು ಹಾಕಿವೆ. ವ್ಯಾಪಂ ಪ್ರಕರಣ ದೇಶದ ಜನರನ್ನು ತಲ್ಲಣಗೊಳಿಸುತ್ತಿದೆ. ಪೇಟಿಎಂ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದಾಗ ಬಿಜೆಪಿಯವರು ಹಿಯಾಳಿಸಿದರು. ಈಗ ಆರ್‌ಬಿಐ ರದ್ದುಗೊಳಿಸಿದೆ. ಮಧ್ಯಪ್ರದೇಶದಲ್ಲಿ ಆರೋಗ್ಯ ಯೋಜನೆಯೊಂದರಲ್ಲಿ ಒಂದೇ ಮೊಬೈಲ್‌ನಲ್ಲಿ 7 ಲಕ್ಷ 69 ಸಾವಿರ ಜನರಿಗೆ 25 ಸಾವಿರ ಕೋಟಿ ರೂ. ವರ್ಗಾಯಿಸಲಾಗಿದೆ. ನೋಟ್ ಬ್ಯಾನ್‌ನಿಂದ ಬಡವರಿಗೆ ಲಾಭವಾಗಿಲ್ಲ. ಕೇಂದ್ರ ಸರ್ಕಾರ ಪ್ರಚಾರಕ್ಕಾಗಿ 6,500 ಕೋಟಿ ರೂ. ಬಳಕೆ ಮಾಡಿದೆ. ಹೀಗೆ ಹತ್ತು ಹಲವು ಭ್ರಷ್ಟಾಚಾರಗಳಿವೆ. ಇದರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡುವುದಿಲ್ಲ. ಇವುಗಳ ದಾಖಲೆ ಇಡುತ್ತೇವೆ. ಬಂದು ಮಾತನಾಡಿ ಎಂದು ಲಾಡ್, ಬಿಜೆಪಿಯವರಿಗೆ ಸವಾಲು ಹಾಕಿದರು.
ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಬಿಟ್ಟಿ ಭಾಗ್ಯವೆಂದು ಬಿಜೆಪಿಯವರು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ಇದೇ ಗ್ಯಾರಂಟಿ ಹೆಸರನ್ನು ಬಿಜೆಪಿಯವರು ಇಟ್ಟುಕೊಂಡಿದ್ದಾರೆ. ನಮ್ಮ ಯೋಜನೆಯನ್ನು ವಿಶ್ವವೇ ನಿಬ್ಬೆರಗಾಗಿ ನೋಡುತ್ತಿದೆ. ಯುಪಿಎ ಸರ್ಕಾರವಿದ್ದಾಗ 56 ಲಕ್ಷ ಕೋಟಿ ರೂ. ಸಾಲ ಮಾಡಲಾಗಿತ್ತು. ಈಗಿನ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದುವರೆಗೆ 190 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಜಿಡಿಪಿ ವೃದ್ಧಿಯಾಗಿದೆ. ಭಾರತ ವಿಶ್ವಗುರು ಆಗಲಿದೆ ಎನ್ನುತ್ತ ಜನರನ್ನು ಬಿಜೆಪಿಯವರು ಮೂರ್ಖರನ್ನಾಗಿಸುತ್ತಿದ್ದಾರೆ. ಪಂಚವಾರ್ಷಿಕ ಯೋಜನೆಗಳ ಮೂಲಕ ಪ್ರತಿ ವರ್ಷ ಜಿಡಿಪಿ ವೃದ್ಧಿಗೆ ಬುನಾದಿ ಹಾಕಿದ್ದು ಕಾಂಗ್ರೆಸ್‌ನವರು. ರಾಜ್ಯದಿಂದ 4 ಲಕ್ಷ ಕೋಟಿ ರೂ. ತೆರಿಗೆ ಹೋಗುತ್ತಿದೆ. ಆದರೆ, ನಮ್ಮ ಪಾಲು ನಮಗೆ ಕೊಡುತ್ತಿಲ್ಲ. ಇದರ ಮಧ್ಯೆಯೂ ಸಿದ್ದರಾಮಯ್ಯ ಸರ್ಕಾರ ಐದು ಯೋಜನೆಗಳನ್ನು ಜನರಿಗೆ ಕೊಟ್ಟು ಆರ್ಥಿಕ ಸಬಲೀಕರಣ ಮಾಡುತ್ತಿದೆ. ಹಣದ ಕೊರತೆ ರಾಜ್ಯ ಸರ್ಕಾರಕ್ಕೆ ಇಲ್ಲ. ಅಭಿವೃದ್ಧಿಯೂ ಅದ್ಭುತವಾಗಿ ನಡೆಯುತ್ತಿದೆ ಎಂದರು.
ಪಾಲಿಕೆ ಸದಸ್ಯರಾದ ಸಂದಿಲಕುಮಾರ, ಕವಿತಾ ಕಬ್ಬೇರ, ದೊರೆರಾಜ ಮನ್ನೆಕುಂಟ್ಲ, ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿಆರ್‌ಜೆ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಇತರರು ಇದ್ದರು.