ಜಿಲ್ಲೆ

ಸಚಿವ ಸಂತೋಷ ಲಾಡ್ ಜಿಲ್ಲಾಡಳಿತಕ್ಕೆ ನಿರ್ದೇಶನ; ಸರ್ಕಾರಿ ಮಹಿಳಾ ಕಾಲೇಜು ಕಟ್ಟಡ ಪುನರುಜ್ಜೀವನಕ್ಕೆ ಕ್ರಮ

ಧಾರವಾಡ: ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜು ನಡೆಯುತ್ತಿರುವ ಕಟ್ಟಡ ಸುಮಾರು 130 ವರ್ಷಗಳಷ್ಟು ಹಳೆಯದು. ಅದನ್ನು ಪುನರುಜ್ಜೀವನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದ ಹತ್ತಿರದ ಸರ್ಕಾರಿ ಮಹಿಳಾ ಕಾಲೇಜು ಮಳೆಯಿಂದ ಸೋರುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಭೇಟಿ ನೀಡಿ ಅವರು ಮಾತನಾಡಿದರು.
ನೂತನ ಕಟ್ಟಡ ನಿರ್ಮಾಣ ಕುರಿತು ಸರ್ಕಾರದ ಹಂತದಲ್ಲಿ ಚರ್ಚಿಸಿ ಅನುದಾನ ಪೂರೈಸಲು ಕ್ರಮ ವಹಿಸಲಾಗುವುದು. ಇದು ಐತಿಹಾಸಿಕ ಕಟ್ಟಡವಾಗಿದ್ದು, ಸದ್ಯದ ವಿನ್ಯಾಸ ಉಳಿಸಿಕೊಂಡು ಕಟ್ಟಡ ದುರಸ್ತಿ ಮಾಡಿ ಕಾಲೇಜು ಬಳಕೆಗೆ ನೀಡಲಾಗುವುದು. ರಾಜ್ಯ ಸರ್ಕಾರವು ಈಗಾಗಲೇ ಮಹಿಳಾ ಕಾಲೇಜು ನೂತನ ಕಟ್ಟಡಕ್ಕೆ ಸುಮಾರು 1 ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ನೂತನ ಕಟ್ಟಡ ನಿರ್ಮಿಸಲು ನೀಲಿನಕ್ಷೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ. ಪಿ.ಬಿ. ಕಲ್ಯಾಣಶೆಟ್ಟರ, ಪ್ರಾಚಾರ್ಯೆ ಡಾ. ಸರಸ್ವತಿ ಕಳಸದ, ಉಪ ವಿಭಾಗಾಧಿಕಾರಿ ಅಶೋಕ ತೇಲಿ, ಪಾಲಿಕೆ ಸದಸ್ಯ ಡಾ. ಮಯೂರ ಮೋರೆ, ನಿರ್ಮಿತಿ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಶಿವಕುಮಾರ ಪಾಟೀಲ, ಇತರರಿದ್ದರು.