ಬೆಂಗಳೂರು: ಬ್ಯಾಟರಾಯನಪುರ ಕ್ಷೇತ್ರದ ಬಾಗಲೂರು-ಬೂದಿಗೆರೆ ರಸ್ತೆಗುಂಡಿಯಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಚಿವರು, ಅಧಿಕಾರಿಗಳು ಗಮನಹರಿಸಿ ರಸ್ತೆ ಗುಂಡಿ ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್‌ಗೌಡ ಒತ್ತಾಯಿಸಿದ್ದಾರೆ.
ರಸ್ತೆ ಗುಂಡಿ ಮುಚ್ಚುವಂತೆ ಒತ್ತಾಯಿಸಿ ಗೋಪಾಲಪುರ ಗ್ರಾಮದ ಬಳಿ ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಇತ್ತೀಚೆಗಷ್ಟೇ ಈ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿತ್ತು. ಆದರೂ, ಕಳಪೆ ಕಾಮಗಾರಿಯಿಂದ ರಸ್ತೆಯಲ್ಲಿ ಗುಂಡಿ ಬಿದ್ದಿವೆ. ಪ್ರತಿನಿತ್ಯ ಅಪಘಾತ ಸಂಭವಿಸಿ ಪ್ರಾಣಹಾನಿ ಉಂಟಾಗುತ್ತಿವೆ. 10 ವಾಹನ ಸವಾರರು ಈವರೆಗೆ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ, ಈ ಬಗ್ಗೆ ಕೃಷ್ಣಬೈರೇಗೌಡ ಸೇರಿ ಗುತ್ತಿಗೆದಾರ ಮತ್ತು ಅಧಿಕಾರಿಗಳು ಗಮನ ಹರಿಸದೆ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಮರಳುಕುಂಟೆ ನಾರಾಯಣಸ್ವಾಮಿ ಮಾತನಾಡಿ, ಈ ರಸ್ತೆಯು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸಲಿದೆ.ಕ್ಷೇತ್ರದ ಶಾಸಕರು ಕಂದಾಯ ಸಚಿವರಾಗಿದ್ದರೂ ಜನರ ಸಮಸ್ಯೆಗೆ ಕಿವಿಗೊಡುತ್ತಿಲ್ಲ. ರಸ್ತೆ ಅಭಿವೃದ್ಧಿಗೆ ಒತ್ತು ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡರಾದ ದಾಸನಾಯಕನಹಳ್ಳಿ ಮುರಳಿ, ಕೃಷ್ಣಪ್ಪ, ಡಿ.ಎಂ.ನಾಗರಾಜ್, ಮಹದೇವ, ಕೊಡಿಗೇಹಳ್ಳಿ ತಿಮ್ಮೇಗೌಡ, ಗೋಪಾಲಪುರ ನಾರಾಯಣಗೌಡ, ಚೊಕ್ಕನಹಳ್ಳಿ ನಾಗರಾಜ್, ನಟರಾಜ್, ಬಾಗಲೂರು ನವೀನ್, ಹರ್ಷ, ಎಂ.ಹೊಸಳ್ಳಿ ಆನಂದ್, ರವಿ, ಕಿರಣ್, ಮರಳುಕುಂಟೆ ನಾರಾಯಣಸ್ವಾಮಿ, ಮಂಜುನಾಥ್, ಪ್ರವೀಣ್ ಯಾದವ್, ಮುನಿರಾಜು, ಕೆಂಪಣ್ಣ, ರಮೇಶ್, ಯಡಿಯೂರು ರಾಜಣ್ಣ, ಚಾಗಲೇಟಿ ಅನಿಲ್, ಮಾರಸಂದ್ರ ಮುನಿರಾಜು, ಮಾರೇನಹಳ್ಳಿ ಚಿಕ್ಕಪ್ಪಣ್ಣ ಮತ್ತು ರಾಜಣ್ಣ ಸೇರಿ ಸುತ್ತಮುತ್ತ ಗ್ರಾಮಸ್ಥರಿದ್ದರು.