ಜಿಲ್ಲೆ

ಭಕ್ತರ ಕೋರಿಕೆಯಂತೆ ಆನ್‌ಲೈನ್ ಸೇವೆ- ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಉಡುಪಿ: ಭಕ್ತರ ಕೋರಿಕೆ ಮೇರೆಗೆ ದೇವಸ್ಥಾನಗಳಲ್ಲಿ ಆನ್‌ಲೈನ್ ಸೇವೆ ಆರಂಭಿಸಲಾಗಿದೆ ಎಂದು ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಲಾಖೆ ದೇವಸ್ಥಾನಗಳಲ್ಲಿ ಆನ್‌ಲೈನ್ ಸೇವೆ ಬಗ್ಗೆ ಕೆಲವರು ಆಕ್ಷೇಪಿಸಿದ್ದಾರೆ. ದೇವಳದಲ್ಲಿ ಆನ್‌ಲೈನ್ ಸೇವೆ ಮೊದಲಿನಿಂದಲೂ ಇದೆ. ಈಗ ಮತ್ತಷ್ಟು ದೇವಸ್ಥಾನಗಳನ್ನು ಆನ್‌ಲೈನ್ ಸೇವೆ ವ್ಯಾಪ್ತಿಗೆ ತರಲಾಗುತ್ತಿದೆ ಎಂದರು.

ಕೊಲ್ಲೂರು ದೇವಸ್ಥಾನದಲ್ಲಿ ಕಳೆದ ವರ್ಷ ಮೂರು ಸಾವಿರ ಆನ್‌ಲೈನ್ ಸೇವೆಗಳು ಸಲ್ಲಿಕೆಯಾಗಿದ್ದವು. ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲೂ ಆನ್‌ಲೈನ್ ಸೇವೆ ಇದ್ದು, ಕಳೆದ ವರ್ಷ ಈ ಆನ್‌ಲೈನ್ ಸೇವೆಯಿಂದ ದೇವಳದ ಖಾತೆಗಳಿಗೆ 49.50 ಲಕ್ಷ ರೂ. ಜಮಾ ಆಗಿದೆ. ಲಾಕ್‌ಡೌನ್‌ನಿಂದಾಗಿ ಭಕ್ತರಿಗೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಹರಕೆ ಹೊತ್ತ ಭಕ್ತರಿಗೆ ಆನ್‌ಲೈನ್ ಸೇವೆಯಿಂದ ಅನುಕೂಲವಾಗಲಿದೆ. ಭಕ್ತರಿಗೆ ನೆಮ್ಮದಿ ಸಿಗಲಿ ಎಂಬ ಕಾರಣಕ್ಕೆ ಆನ್‌ಲೈನ್ ಸೇವೆ ಆರಂಭಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ದೇವಸ್ಥಾನಗಳಿಗೆ ಬಾಗಿಲು ಹಾಕಿದ್ದು, ಪೂಜೆ ನಡೆಯುತ್ತಿಲ್ಲ ಎಂಬ ವಿಚಾರ ಹರಿದಾಡುತ್ತಿದೆ, ಆದರೆ ಎಲ್ಲ ದೇವಸ್ಥಾನಗಳಲ್ಲಿ ಸಾಂಪ್ರದಾಯಿಕ ಪೂಜೆ ನಡೆಯುತ್ತಿದೆ. ಲಾಕ್‌ಡೌನ್ ಮುಗಿದ ನಂತರ ದೈಹಿಕ ಅಂತರ ನಿಯಮ ಪಾಲಿಸಿಕೊಂಡು ದೇವಸ್ಥಾನ ತೆರೆಯುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.