ಜಿಲ್ಲೆ

ಮೀನುಗಾರರ ಸಾಲಮನ್ನಾ ಮೊತ್ತ ಶೀಘ್ರ ಖಾತೆಗೆ- ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ಉಡುಪಿ: ಕೋವಿಡ್ -19 ಸಂಕಷ್ಟದ ದಿನಗಳಲ್ಲಿ ಮೀನುಗಾರರ ಸಾಲಮನ್ನಾ ಯೋಜನೆಗೆ ಮುಖ್ಯಮಂತ್ರಿ ಹಣ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಫಲಾನುಭವಿಗಳ ಖಾತೆಗೆ ಶೀಘ್ರದಲ್ಲಿ ಹಣ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೂಚಿಸಿದರು.

ಡಿಸಿ ಕಚೇರಿಯಲ್ಲಿ ಮೀನುಗಾರರ ಸಾಲ ಮನ್ನಾ ಯೋಜನೆಗೆ ಸಂಬಂಧಪಟ್ಟಂತೆ ರಾಷ್ಟ್ರೀಕೃತ ಬ್ಯಾಂಕುಗಳ ಹಿರಿಯ ಅಧಿಕಾರಿಗಳು, ಪ್ರಮುಖ ಮೀನುಗಾರರ ಸಹಕಾರ ಸಂಘಗಳ ಅಧ್ಯಕ್ಷರು, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಮಹಿಳಾ ಮೀನುಗಾರರ ಸಾಲ ಮನ್ನಾ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ರುದ್ರೇಶ್ ಮಾತನಾಡಿ, ಈಗಾಗಲೇ ಆರ್ಥಿಕ ಇಲಾಖೆಯ ಮೂಲಕ 60 ಕೋಟಿ ರೂ. ಹಣ ಬಿಡುಗಡೆಯಾಗಿದ್ದು, ಫಲಾನುಭವಿಗಳ ಡಾಟಾ ಎಂಟ್ರಿ ಮುಗಿಯುತ್ತಿದೆ. ಸದ್ಯದಲ್ಲೇ ಸಾಲಗಾರರ ಖಾತೆಗೆ ಹಣ ಜಮಾ ಆಗಲಿದೆ. ಜಿಲ್ಲೆಯಲ್ಲಿ ವಿಜಯ ಬ್ಯಾಂಕ್ ಮೂಲಕ 770 ಮತ್ತು ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ 19,522 ಮಂದಿ ಸಾಲ ಪಡೆದಿದ್ದು ಒಟ್ಟು 20,295 ಮಂದಿ ಮಹಿಳಾ ಮೀನುಗಾರರ 59 ಕೋಟಿ ರೂ. ಸಾಲ ಮನ್ನಾಗೊಳ್ಳಲಿದೆ ಎಂದು ವಿವರಿಸಿದರು.

ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಜಿ. ಜಗದೀಶ್, ದ.ಕ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು , ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಗಣೇಶ್ ಉಪಸ್ಥಿತರಿದ್ದರು.