ಜಿಲ್ಲೆ

ಇಷ್ಟವಿದ್ರೆ ಕೆಲಸ ಮಾಡಿ, ಇಲ್ಲದಿದ್ರೆ ಹೊರಡಿ

ಶಿವಮೊಗ್ಗ: ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್​ಸಿಟಿ ಕಾಮಗಾರಿ ಬಗ್ಗೆ ಅಪಸ್ವರಗಳು ಕೇಳಿಬರುತ್ತಿರುವ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಕೆಲಸ ವಿಳಂಬಕ್ಕೆ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.

ಸ್ಮಾರ್ಟ್​ಸಿಟಿ ಕಚೇರಿಯಲ್ಲಿ ಬುಧವಾರ ಪಾಲಿಕೆ ಆಯುಕ್ತರು ಮತ್ತು ಪರಿಸರಾಸಕ್ತರೊಂದಿಗೆ ಸಭೆ ನಡೆಸಿದ ಅವರು, ನಿಮಗೆ ಇಷ್ಟವಿದ್ದರೆ ಕೆಲಸ ಮಾಡಿ, ಇಲ್ಲದಿದ್ದರೆ ಹೊರಟು ಹೋಗಿ. ನನಗೆ ಬೇರೆ ಅಧಿಕಾರಿಗಳನ್ನು ನೇಮಿಸಿಕೊಂಡು ಕೆಲಸ ಮಾಡಿಸುವುದು ಗೊತ್ತಿದೆ ಎಂದು ಗುಡುಗಿದರು.

ರಸ್ತೆ ಸೇರಿ ಸ್ಮಾರ್ಟ್​ಸಿಟಿ ಕಾಮಗಾರಿಗಳು ಸಮರ್ಪಕವಾಗಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸೂಕ್ತ ಕ್ಯೂರಿಂಗ್ ಕೂಡ ನಡೆಯುತ್ತಿಲ್ಲ. ತಿಂಗಳಾದರೂ ಕೆಲಸಗಳು ಆಗಿಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದ ಸಚಿವರು, ನಿಮಗೆ ಇಷ್ಟವಿಲ್ಲದಿದ್ದರೆ ಬಿಟ್ಟು ಹೋಗಿ. ಕೆಲಸ ಆರಂಭವಾದ ಒಂದು ವಾರದೊಳಗೆ ಮುಗಿಯಬೇಕು. ಅಧಿಕಾರಿಗಳ ಜತೆ ಚೆನ್ನಾಗಿರಬೇಕು ಎಂಬುದು ನನ್ನ ಆಸೆ. ಆದರೆ ಹೀಗೆ ನಿರ್ಲಕ್ಷ್ಯವಹಿಸಿದರೆ ಸುಮ್ಮನಿರಲು ಸಾಧ್ಯವಿಲ್ಲ. ನಿಮಗೆ ನಾನು ತೊಂದರೆ ಕೊಡುವುದಿಲ್ಲ. ನೀವು ಎಲ್ಲಿಗೆ ಬೇಕಾದರೂ ವರ್ಗಾವಣೆ ತೆಗೆದುಕೊಳ್ಳಿ. ನಾನು ಬೇರೆಯವರನ್ನು ನೇಮಿಸಿಕೊಂಡು ಕಾಮಗಾರಿಗಳನ್ನು ಮುಗಿಸುತ್ತೇನೆ ಎಂದು ತಿಳಿಸಿದರು.