ಜಿಲ್ಲೆ

ಉಲ್ಟಾ ಹೊಡೆದ ಸಚಿವ ರಾಜಣ್ಣ

ತುಮಕೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವೋಟರ್​ ಲಿಸ್ಟ್​ ನಮ್ಮ ಸರ್ಕಾರ ಇದ್ದಾಗ ಮಾಡಿದ್ದಾಗಿ ನಿನ್ನೆ ಪಕ್ಷಕ್ಕೆ ಮುಜಗರವಾಗುವ ಹೇಳಿಕೆ ನೀಡಿದ್ದ ಸಹಕಾರ ಸಚಿವ ಕೆ.ಎನ್​.ರಾಜಣ್ಣ ಭಾನುವಾರ ಉಲ್ಟಾ ಹೊಡೆದಿದ್ದಾರೆ. ಕಳ್ಳತನದಲ್ಲಿ ಪಡೆದ ಮತಗಳಿಂದ ಗೆದ್ದು ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮತಕಳ್ಳತನ ವಿರೋಧಿಸಿ ಮೊನ್ನೆ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಲೋಕಸಭಾ ವಿಪಕ್ಷ ನಾಯಕ ರಾಹುಲ್​ ಗಾಂಧಿ ವಿಶೇಷವಾಗಿ ಮದೇವಪುರದಲ್ಲಿ ನಡೆದಿರುವ ಅಕ್ರಮಗಳನ್ನು ಪ್ರಸ್ತಾಪಿಸಿದ್ದು ಯಾಕೆಂದರೆ ಕಳೆದ ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ಕೇಂದ್ರ ಕ್ಷೇತ್ರ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ 7ರಲ್ಲಿ ಕಾಂಗ್ರೆಸ್​ ಮುನ್ನಡೆ ಸಾಧಿಸಿತ್ತು. ಆದರೆ, ಮಹದೇವಪುರದಲ್ಲಿ ಬಿಜೆಪಿಗೆ 1 ಲಕ್ಷ 2 ಸಾವಿರ ಮತಗಳ ಮುನ್ನಡೆಸಿಕ್ಕಿದ್ದರಿಂದ 35&40 ಸಾವಿರ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಸೋತಿದ್ದು ಚುನಾವಣಾ ಅಕ್ರಮ ನಡೆದಿರುವುದು ಬಲವಾಗಲು ಕಾರಣ ಎಂದು ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಮತಕಳ್ಳತನದ ಬಗ್ಗೆ ಒಂದೊಂದಾಗಿ ಬರುತ್ತಿರುವ ಮಾಧ್ಯಮಗಳ ವರದಿಗಳನ್ನು ನೋಡಿದರೆ ಅಲ್ಲಿ ನಿಜಕ್ಕೂ ಮತಗಳ್ಳತನ ಆಗಿದೆ. ಇದೇ ರೀತಿ ಬಹಳಷ್ಟು ಕ್ಷೇತ್ರದಲ್ಲಿ ಮತಕಳ್ಳತನ ಮಾಡಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಈ ರೀತಿ ಕಳ್ಳತನದಲ್ಲಿ ಮತಗಳನ್ನ ಪಡೆದು ಗೆದ್ದಿರುವ ಮೋದಿ ಪ್ರಧಾನ ಮತ್ರಿ ಆಗಿದ್ದಾರೆ. ಇದು ಸರಿಯಲ್ಲ ಎಂಬುದು ರಾಹುಲ್​ಗಾಂಧಿ ನೇರವಾಗಿ ಆರೋಪವಾಗಿದೆ ಎಂದರು.

ತುಮಕೂರು ಲೋಕಸಭಾ ಕ್ಷೇತ್ರದಲ್ಲು ಅತಿಹೆಚ್ಚು ಮತಗಳ ಅಂತರಿಂದ ಬಿಜೆಪಿ ಅಭ್ಯರ್ಥಿ ಗೆದ್ದಿದ್ದು ಇಲ್ಲು ಮತ ಕಳ್ಳತನ ಆಗಿದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ, ಹಳ್ಳಿಗಳ ಕಡೆ ಆ ರೀತಿ ಆಗಲಿಕ್ಕೆ ಸಾಧ್ಯವಿಲ್ಲ. ಒಂದು ಬೂತ್​ನಲ್ಲಿ ಯಾರಾದರು ಹೊಸಬರು ಮತ ಚಲಾಯಿಸಲಿಕ್ಕೆ ಹೋದರೆ ಎಲ್ಲರಿಗೋ ಗೊತ್ತಾಗುತ್ತೆ. ನಗರ ಪ್ರದೇಶಗಳಲ್ಲಿ ಮತದಾರರನ್ನು ಗುರುತು ಹಿಡಿಯಲಿಕ್ಕೆ ಆಗುವುದಿಲ್ಲ. ಗ್ರಾಮೀಣಭಾಗದಲ್ಲಿ ಆ ರೀತಿ ಆಗಲಿಕ್ಕೆ ಅವಕಾಶಾನೇ ಇಲ್ಲ. ಸೋಮಣ್ಣನೂ ಅದೇ ತರ ಗೆದ್ದಿದ್ದಾರೆ ಅಂತ ತಿಳಿದುಕೊಳ್ಳಬೇಡಿ ಎಂದು ರಾಜಣ್ಣ ಸ್ಪಷ್ಟಪಡಿಸಿದರು.

ಚುನಾವಣಾ ಆಯೋಗದ ವೆಬ್​ಸೈಟ್​ ಬಂದ್​ ಆಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ, ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ ಅವರನ್ನು ಸರ್ವಾಧಿಕಾರಿ ಅನ್ನುತ್ತಿದ್ದರು. ಅಂತಾ ಕಾಲದಲ್ಲು ಸಿಬಿಐ, ಇಡಿ, ಐಟಿ ಈ ರೀತಿ ದುರುಪಯೋಗ ಮಾಡಿಕೊಳ್ಳುತ್ತಿರಲಿಲ್ಲ. ಈಗ ಪ್ರತಿಯೊಂದರಲ್ಲು ಕೂಡ ಏಜೆನ್ಸಿಗಳನ್ನ ದುರುಪಯೋಗ ಮಾಡಿಕೊಂಡು ರಾಜಕೀಯ ವಿರೋಧಿಗಳನ್ನ ಭಯಭೀತಿಗೊಳಿಸಲಾಗುತ್ತಿದೆಯಲ್ಲದೆ, ಅವರನ್ನು ರಾಜಕೀಯ ಕ್ಷೇತ್ರದಲ್ಲಿ ಸಕ್ರೀಯವಾಗಿ ಇರದಂತೆ ನೋಡಿಕೊಳ್ಳುವ ದುರುದ್ದೇಶ ಇಟ್ಟುಕೊಳ್ಳಲಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಳ್ಳೆಯದಲ್ಲ. ಇವತ್ತು ಇವರು ಅಧಿಕಾರದಲ್ಲಿರ್ತಾರೆ, ನಾಳೆ ಬೇರೆಯರು ಅಧಿಕಾರಕ್ಕೆ ಬರಲಿದ್ದು ಅವರು ಇದೇ ರೀತಿ ಮಾಡಿದರೆ ದ್ವೇಷದ ರಾಜಕಾರಣ ಆಗಲಿದೆ ಎಂದು ತಿಳಿಸಿದರು.