ತುಮಕೂರು: ಲೋಕಸಭಾ ಚುನಾವಣೆ ಬರುತಿರೋದ್ರಿಂದ ಬಿಜೆಪಿ ಅವರು ಈ ಪೇಸಿಎಸ್ ಅಪಪ್ರಚಾರ ಮಾಡ್ತಿದ್ದಾರೆ. ಪಕ್ಷ ಕೊಟ್ಟಿದ್ದ ಐದು ಗ್ಯಾರಂಟಿಗಳನ್ನ ಜನರಿಗೆ ತಲುಪಿಸಿದ್ದೇವೆ. ಅದನ್ನು ಸಹಿಸಲಾಗದೇ ಹೊಟ್ಟೆ ಕಿಚ್ಚಿಗೆ ಈ ರೀತಿ ಆರೋಪ ಮಾಡುತ್ತಿದ್ದಾರೆ. ಪೇ ಸಿಎಮ್ಮೂ ಅಲ್ಲ, ಪೇಡಿಸಿಎಮ್ಮೂ ಅಲ್ಲ, ಪೇ ಚೆಲುವರಾಯಸ್ವಾಮಿಯು ಅಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ನ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರಲ್ಲೂ ಕಮಿಷನ್ ಪಡೆಯಲು ಏಜೆಂಟ್ ಇದ್ದಾರೆಂಬ ಆರೋಪ ಸಹ ನಿರಾಧಾರ. ಆರೋಪಗಳ ಮೇಲೆ ನ್ಯಾಯಾಂಗದ ಮೊರೆ ಹೋಗಿ. ಈ ರೀತಿ ಸುಳ್ಳು ಆರೋಪಗಳನ್ನು ಮಾಡುವುದರಲ್ಲಿ ಅರ್ಥವಿಲ್ಲ. ಈ ಹಿಂದೆ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆಗೆ ಆದೇಶಿಸಿದ್ದು ಕಾನೂನಿನ ಕ್ರಮ ಕೈಗೊಳ್ಳುವ ಪ್ರಯತ್ನವನ್ನ ನಾವು ಮಾಡುತ್ತಿದ್ದೇವೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಬರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ರಾಜಣ್ಣ, ಪಕ್ಷಕ್ಕೆ ಯಾರು ಬೇಕಾದರು ಬರಬಹುದು ಹೋಗಬಹುದು, ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಯಾರು ಬರಲಿ, ಬಿಡಲಿ ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.