ಜಿಲ್ಲೆ

ಸ್ವಾಮೀಜಿಗಳು ಹೇಳಿದ್ದಂಗೆ ನಡೆಯೋದಿದ್ದರೆ ರಾಜಕಾರಣಿಗಳು ಯಾಕೆ ಬೇಕಿತ್ತು?

ತುಮಕೂರು: ಸ್ವಾಮೀಜಿಗಳು ಹೇಳಿದ್ದಂಗೆ ಎಲ್ಲಾ ನಡೆಯುವ ಹಾಗೇ ಇದ್ದಿದ್ದರೆ ರಾಜಕಾರಣಿಗಳು ಯಾಕೆ ಇರಬೇಕಿತ್ತು. ಎಲ್ಲಾ ಸ್ವಾಮೀಜಿಗಳೇ ತೀರ್ಮಾನ ಮಾಡಬಹುದಿತ್ತಲ್ಲವಾ ಎಂದು ಸಹಕಾರ ಸಚಿವ ಕೆ.ಎನ್​.ರಾಜಣ್ಣ ಪರೋಕ್ಷವಾಗಿ ಸಿಎಂ ಆಗಬೇಕೆನ್ನುವ ಪರಮೇಶ್ವರ್​ ಆಸೆಗೆ ತಣ್ಣೀರೆರಚಿದರು.

ಪರಮೇಶ್ವರ್​ ಸಿಎಂ ಆಗಬೇಕು ಅವಕಾಶ ಬಂದಾಗ ಅಂತಾ ಹೇಳೋನು ನಾನು. ಸ್ವಾಮಿಗಳು ಹೇಳಿದಂಗೆ ನಡೀತಾವ ರಾಜಕಾರಣ. ನಡಿಲೀ ನೋಡೋಣಾ. ಪರಮೇಶ್ವರ್​ ಸಿಎಂ ಆಗಬೇಕು ಅಂತ ಸ್ವಾಮಿಗಳು ಹೇಳಿರುವುದಕ್ಕೆ ನನಗು ಬಹಳ ಸಂತೋಷ. ಹಾಗೇ ಹೇಳಿರುವ ಸ್ವಾಮೀಜಿಗಳಿಗೆಲ್ಲಾ ನಾನು ಅಭಿನಂದಿಸುತ್ತೀನಿ ಎಂದು ನಗರದಲ್ಲಿ ಶನಿವಾರ ಪತ್ರಕರ್ತರ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಅಭಿಮಾನ, ಗೌರವದಿಂದ ಹೇಳಿದ್ದಾರೆ ! : ಪರಮೇಶ್ವರ್​ ಸಿಎಂ ಆಗಬೇಕು ಎಂದು ವಿವಿಧ ಮಠಾಧೀಶರು ಅಭಿಮಾನ, ಪ್ರೀತಿಯಿಂದ ಗೌರವದಿಂದ ಹೇಳಿರುವುದು ತಪ್ಪಾ? ತಪ್ಪಾಗಿದ್ರೆ ಅವರನ್ನ ಕೇಳಿ. ನನ್ನ ಹುಟ್ಟುಹಬ್ಬಕ್ಕೆ ಎಲ್ಲರೂ ಸೇರಿದ್ದು ಒಳ್ಳೆದಾಗಲಿ ಅಂತಾ ಹೇಳಿದ್ದಾರೆ ಎಂದು ಸಚಿವ ಪರಮೇಶ್ವರ್​ ಹೇಳಿದರು.

ಜನರ ಅಭಿಪ್ರಾಯ ಭಿನ್ನವಾಗಿರುತ್ತದೆ. ಪ್ರೀತಿ ವಿಶ್ವಾಸದಿಂದ ಗೌರವದಿಂದ ಒಳ್ಳೆಯ ಮಾತನ್ನಾಡುತ್ತಾರೆ. ಅದು ಕೆಲವರಿಗೆ ಹಿಡಿಸಬಹುದು ಇನ್ನೂ ಕೆಲವರಿಗೆ ಹಿಡಿಸದೇ ಇರಬಹುದು. ಅದು ಸಮಾಜ. ಅಷ್ಟೊಂದು ಸ್ವಾಮೀಜಿಗಳು ಸೇರಿ ತುಮಕೂರಿನ ಅಭಿವೃದ್ಧಿ ಬಗ್ಗೆ ಮಾತನಾಡುವಾಗ ಆ ಮಾತು ಹೇಳಿದಾರೆ. ಅವರಿಗೆ ಅತ್ಯಂತ ಗೌರವಯುತವಾದ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.