ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಅಹ್ಮದಾಬಾದ್ ಮತ್ತು ಚೆನೈಗೆ ವಿಮಾನಯಾನ ಸೌಲಭ್ಯ ಕಲ್ಪಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ನಾಗರಿಕ ವಿಮಾನಯಾನ ಸಚಿವರ ಗಮನ ಸೆಳೆದಿದ್ದಾರೆ.
ದೆಹಲಿಯ ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಗುರುವಾರದಂದು ಸಚಿವ ರಾಮಮೋಹನ ನಾಯ್ದು ಅವರನ್ನು ಭೇಟಿ ಮಾಡಿ, ಈ ಬಗ್ಗೆ ರ್ಚಚಿಸಿದರು.
ಹುಬ್ಬಳ್ಳಿಯಿಂದ ಅಹಮದಾಬಾದ್ ನಡುವೆ ವಿಮಾನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸಚಿವ ಜೋಶಿ ಮನವಿ ಮಾಡಿದರು.
ಹುಬ್ಬಳ್ಳಿಯಿಂದ ಚೆನೈಗೆ ಇರುವ ವಿಮಾನ ಸಂಪರ್ಕವನ್ನು ಸ್ಥಗಿತಗೊಳಿಸಲಾಗುತ್ತಿದ್ದು, ಈ ವಿಮಾನಯಾನವನ್ನು ಮುಂದುವರೆಸುವಂತೆ ಸಚಿವ ನಾಯ್ಡು ಅವರಲ್ಲಿ ಮನವಿ ಮಾಡಿದರು.
ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಅನೇಕ ಉದ್ಯಮಿಗಳ ಸಂಪರ್ಕವಿದೆ. ಅಹ್ಮದಾಬಾದ್ ಮತ್ತು ಚೆನೈ ನಗರಗಳಿಗೆ ವಿಮಾನ ಸಾರಿಗೆ ಸೌಲಭ್ಯಕ್ಕೆ ಹೆಚ್ಚು ಆದ್ಯತೆ ನೀಡಿದಲ್ಲಿ ಉದ್ಯಮಿಗಳ ತ್ವರಿತ ಸಂಚಾರ ಮತ್ತು ನಿಕಟ ಸಂಪರ್ಕಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಹುಬ್ಬಳ್ಳಿ ಒಂದು ಪ್ರಮುಖ ವಾಣಿಜ್ಯ ಕೇಂದ್ರ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹ ಗುರುತಿಸಿಕೊಳ್ಳುತ್ತಿದೆ. ಅಂತೆಯೇ ರೈಲ್ವೆ ನಿಲ್ದಾಣದ ಜತೆ ವಿಮಾನ ನಿಲ್ದಾಣವೂ ಅಂತಾರಾಷ್ಟ್ರೀಯ ಮೆರುಗಿನಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದು ಪ್ರಲ್ಹಾದ ಜೋಶಿ ಅವರು ಸಚಿವ ನಾಯ್ಡು ಅವರ ಗಮನ ಸೆಳೆದರು.
ಹುಬ್ಬಳ್ಳಿ ವಿಮಾನ ನಿಲ್ದಾಣದ ವಿಶಾಲವಾದ ಪ್ರದೇಶದಲ್ಲಿ ಹೊಸ ಟರ್ವಿುನಲ್ ಸಹ ನಿಮಾಣಗೊಳ್ಳುತ್ತಿದೆ. ಪ್ರಯಾಣಿಕರಿಗೆ ಮತ್ತು ವಿಮಾನಗಳಿಗೆ ಅಗತ್ಯ ಮೂಲ ಸೌಲಭ್ಯ ಇಲ್ಲಿದ್ದು, ಚೆನೈ ಸಂಪರ್ಕದ ವಿಮಾನಯಾನ ಸ್ಥಗಿತಗೊಳಿಸದೆ ಮುಂದುವರೆಸಿ ಎಂದು ನಾಗರಿಕ ವಿಮಾನಯಾನ ಸಚಿವರೊಂದಿಗೆ ಪ್ರಲ್ಹಾದ ಜೋಶಿ ಸಮಾಲೋಚನೆ ನಡೆಸಿದರು.