ಜಿಲ್ಲೆ

ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಆಡಿದ ಮಾತಿಗೆ ಕ್ಷಮೆಯಾಚಿಸಿದ ಸಚಿವ ಜಮೀರ್ ಅಹ್ಮದ್

ಮೈಸೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕುರಿತು ನಾನು ಆಡಿರುವ ಮಾತಿನಿಂದ ಯಾರಿಗಾದರು ನೋವು, ಬೇಸರವಾಗಿ ದ್ದರೆ ಕ್ಷಮೆ ಕೇಳುತ್ತೇನೆೆ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಗ್ಗೆ ನನಗೆ ಗೌರವ ಇದೆ

ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಹಾಗೂ ಕುಮಾರಸ್ವಾಮಿ ತುಂಬಾ ಆತ್ಮೀಯರು. ಮೊದಲಿನಿಂದಲೂ ಅವರು ನನ್ನನ್ನು ಕುಳ್ಳಣ್ಣ ಅನ್ನುತ್ತಿದ್ದರು, ನಾನು ಅವರನ್ನು ಕರಿಯಣ್ಣ ಅನ್ನುತ್ತಿದ್ದೆ. ನಾನು ಇದೇ ಮೊದಲ ಬಾರಿ ಏನು ಅವರನ್ನು ಕರಿಯಣ್ಣ ಅಂತ ಕರೆದಿದ್ದಲ್ಲ, ಈ ಹಿಂದೆ ಹಲವಾರು ಸಂದರ್ಭದಲ್ಲಿ ಕರಿಯಣ್ಣ ಎಂದು ಕರೆದಿದ್ದೇನೆ. ನನ್ನ ಮಾತಿನಿಂದ ಅವರಿಗೆ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ನಾನು ಪ್ರೀತಿಯಿಂದ ಅವರನ್ನು ಕರಿಯಣ್ಣ ಎಂದು ಕರೆದಿದ್ದೇನೆ. ರಾಜೀನಾಮೆ ಕೊಡುವ ತಪ್ಪನ್ನು ನಾನೇನು ವಾಡಿಲ್ಲ. ರಾಜೀನಾಮೆ ಕೊಡುವ ಅಗತ್ಯವೂ ಇಲ್ಲ. ನನ್ನ ಹೇಳಿಕೆಯು ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.

ಎಚ್.ಡಿ.ದೇವೇಗೌಡರ ಕುಟುಂಬ ಕೊಂಡುಕೊಳ್ಳುತ್ತೇನೆಂದು ನಾನು ಹೇಳಿಲ್ಲ. ಯಾರಾದರೂ ದೇವೇಗೌಡರ ಕುಟುಂಬ ಖರೀದಿ ಮಾಡಲು ಸಾಧ್ಯವೇ? ಕುಮಾರಸ್ವಾಮಿ ಅವರು ಮುಸ್ಲಿಂ ಮತದಾರರನ್ನು ಹಣ ನೀಡಿ ಖರೀದಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಈ ಮಾತನ್ನು ಆಡಿದ್ದೇನೆ. ‘ಮುಸ್ಲಿಂ ಓಟ್ ನನಗೆ ಬೇಡ, ಮುಸ್ಲಿಮರ ಬಳಿ ನಾನು ಹೋಗುವುದಿಲ್ಲ, ನನ್ನ ಬಳಿ ನೀವು ಬರಬೇಡಿ, ನಿಮ್ಮ ಮತ ಬೇಡ’ ಎಂದು ಕುಮಾರಸ್ವಾಮಿ ಹೇಳಿದ್ದರು. ಆದರೆ, ಚುನಾವಣೆ ಸಂದರ್ಭದಲ್ಲಿ ಮುಸ್ಲಿಂ ಮತಗಳನ್ನು ಖರೀದಿ ಮಾಡಲು ಕುಮಾರಸ್ವಾಮಿ ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾತನ ಕಾಲದಿಂದಲೇ ನಾನು ಬಸ್ ಮಾಲೀಕ. ನಾನು ಕುಮಾರಸ್ವಾಮಿಗೋಸ್ಕರ ಬಸ್ ಓಡಿಸಿದವನು. ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಲು ಶಾಸಕರನ್ನು ರಾಜ್ಯಪಾಲರ ಬಳಿಗೆ ಕರೆದೊಯ್ಯಲು ನಾನು ಬಸ್ ಓಡಿಸಿಕೊಂಡು ಹೋಗಿದ್ದೆ. ಸ್ವಾತಂತ್ರೃ ಪೂರ್ವದಿಂದಲೇ ನನ್ನ ಕುಟುಂಬದವರು ಬಸ್ ಮಾಲೀಕರು ಎಂದರು.