ಶಿವಮೊಗ್ಗ: ಸಕ್ರೆಬೈಲ್ ಆನೆ ಬಿಡಾರದಲ್ಲಿ ನಾಲ್ಕು ಆನೆಗಳು ಗಾಯಗೊಂಡಿದ್ದು, ಪಶು ವೈದ್ಯರ ನೇಮಕಾತಿ ಸಂಬಂಧ ತುರ್ತು ಕ್ರಮ ವಹಿಸುವಂತೆ ಬೆಂಗಳೂರು ಅರಣ್ಯ ಭವನದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ.
ಸಕ್ರೆಬೈಲು ಆನೆ ಶಿಬಿರದಲ್ಲಿರುವ 35 ವರ್ಷದ ಬಾಲಣ್ಣ ಆನೆಯನ್ನು ಶಿವಮೊಗ್ಗ ದಸರಾ ಮಹೋತ್ಸವಕ್ಕೆ ಕಳುಹಿಸಲಾಗಿತ್ತು. ಆ ಸಂದರ್ಭದಲ್ಲಿ ಗಾಯಗೊಂಡಿದ್ದ ಆನೆಗೆ ಐವಿ ಚುಚ್ಚುಮದ್ದು ನೀಡುವ ಸಂದರ್ಭದಲ್ಲಿ ಆಗಿರುವ ನಿರ್ಲಕ್ಷ್ಯದಿಂದ ಸೋಂಕು ಆಗಿ ನರಳುತ್ತಿದೆ. ಇದರ ಜತೆಗೆ ಶಿಬಿರದಲ್ಲಿರುವ ಸಾಗರ್ ಸೇರಿ 4 ಆನೆಗಳು ಗಾಯದಿಂದ ಬಳಲುತ್ತಿವೆ. ಅಲ್ಲಿ ಪಶುವೈದ್ಯರ ಕೊರತೆ ಇರುವುದು ಗಮನಕ್ಕೆ ಬಂದಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿರುವ ಎಲ್ಲ ಆನೆ ಶಿಬಿರಗಳಲ್ಲಿ ಮತ್ತು ಮೃಗಾಲಯಗಳಲ್ಲಿ ಸಮರ್ಪಿತ ವೈದ್ಯಾಧಿಕಾರಿ ಇರಬೇಕು. ವೈದ್ಯರ ಕೊರತೆ ಇದ್ದರೆ ಗುತ್ತಿಗೆಯ ಆಧಾರದಲ್ಲಿ ಅಥವಾ ನಿಯೋಜನೆಯ ಮೇಲೆ ವೈದ್ಯರನ್ನು ತಕ್ಷಣ ನೇಮಕ ಮಾಡಿಕೊಳ್ಳಬೇಕು ಎಂದು ಈ ಹಿಂದೆ ಹಲವು ಸಭೆಗಳಲ್ಲಿ ತಿಳಿಸಲಾಗಿತ್ತು. ಈ ಬಗ್ಗೆ ತುರ್ತು ಕ್ರಮ ವಹಿಸಲು ಮತ್ತು ಬಾಲಣ್ಯ ಆನೆಗೆ ಚುಚ್ಚು ಮದ್ದು ನೀಡುವ ವೇಳೆ ವೈದ್ಯಾಧಿಕಾರಿ, ಅಧಿಕಾರಿ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯ ಇದ್ದಲ್ಲಿ ಅವರ ವಿರುದ್ಧ ಶಿಸ್ತುಕ್ರಮದ ಶಿಫಾರಸಿನೊಂದಿಗೆ ಒಂದು ವಾರದೊಳಗೆ ಸಮಗ್ರ ವರದಿ ನೀಡುವಂತೆ ಸೂಚಿಸಿದ್ದಾರೆ.