Illegal mining 
ಜಿಲ್ಲೆ

ಜಿಲ್ಲೆಯಲ್ಲಿ 256 ಅಕ್ರಮ ಗಣಿಗಾರಿಕೆ ಪ್ರಕರಣ ಪತ್ತೆ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾಹಿತಿ

ಮಂಡ್ಯ: ಜಿಲ್ಲಾ ವ್ಯಾಪ್ಯಿಯಲ್ಲಿನ ಕಲ್ಲುಗಣಿ ಗುತ್ತಿಗೆದಾರರಿಂದ 2022-23ನೇ ಸಾಲಿನ ಅಂತ್ಯದವರೆಗೆ ಸರ್ಕಾರಕ್ಕೆ 26.78 ಕೋಟಿ ರೂ. ಬಾಕಿ ಪಾವತಿ ಆಗಬೇಕಿರುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಕಲ್ಲು ಗಣಿಗಾರಿಕೆ ಗುತ್ತಿಗೆ/ ಲೈಸೆನ್ಸ್ ಪಡೆಯದೆ ಕಳೆದ ಐದು ವರ್ಷಗಳಲ್ಲಿ ಅಕ್ರಮ ಗಣಿಗಾರಿಕೆ ಸಂಬಂಧ 256 ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957 ಮತ್ತು ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು, 1994ರ ನಿಯಮಗಳಂತೆ 256 ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದವರ ವಿರುದ್ಧ ದಾಖಲಿಸಿರುವ 256 ಮೊಕದ್ದಮೆಗಳ ಸಂಬಂಧ ಒಟ್ಟು 42.92 ಲಕ್ಷ ಮೆಟ್ರಿಕ್ ಟನ್ ಉಪ ಖನಿಜವನ್ನು ಅಂದಾಜಿಸಿದ್ದು, ಸದರಿ ಖನಿಜದ ಮೌಲ್ಯವು 53.11 ಕೋಟಿ ರೂ. ಆಗಿದ್ದು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಮತ್ತೊಂದು ಪ್ರಶ್ನೆಗೆ ಮಾಹಿತಿ ನೀಡಿದ್ದಾರೆ.

ಎಳನೀರು ಮಾರುಕಟ್ಟೆ ಶುಚಿತ್ವಕ್ಕೆ ಒತ್ತು: ಮದ್ದೂರು ಎಪಿಎಂಸಿ ಎಳನೀರು ಮಾರುಕಟ್ಟೆಯಲ್ಲಿ ಕಳೆದ ಐದು ವರ್ಷಗಳಲ್ಲಿ 898.33 ಕೋಟಿ ರೂ. ವಹಿವಾಟು ಆಗಿದೆ. ಈ ಮೊತ್ತದ ಬಾಬ್ತಿನಡಿ 9.51 ಕೋಟಿ ರೂ. ಆದಾಯ ಬಂದಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ ತಿಳಿಸಿದ್ದಾರೆ.

ಮಾರುಕಟ್ಟೆಯಲ್ಲಿ ಮೂಲ ಸೌಲಭ್ಯ ಹಾಗೂ ಶುಚಿತ್ವಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ನಲ್ಲಿ ಸದಸ್ಯ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಮಂಗಳವಾರ ಲಿಖಿತ ಉತ್ತರ ನೀಡಿರುವ ಸಚಿವರು, ಮಾರುಕಟ್ಟೆಗೆ ಆಗಮಿಸುವ ರೈತರು, ಗ್ರಾಹಕರು, ವ್ಯಾಪಾರಸ್ಥರಿಗೆ ಸೂಕ್ತ ಮೂಲಸೌಕರ್ಯಗಳನ್ನು ಕಲ್ಪಿಸುವುದರ ಜತೆಗೆ ಮಾರುಕಟ್ಟೆ ಪ್ರಾಂಗಣದಲ್ಲಿ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದ್ದಾರೆ.

ಕಳೆದ ಐದು ವರ್ಷಗಳಲ್ಲಿ (2018-19 ರಿಂದ 2022-23) ಸ್ವಚ್ಛತೆಗೆ 74.49 ಲಕ್ಷ ರೂ. ಹಾಗೂ ಮೂಲಸೌಕರ್ಯ ಕಲ್ಪಿಸಲು 7.11 ಕೋಟಿ ರೂ. ವೆಚ್ಚ ಭರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.