ಜಿಲ್ಲೆ

ದಲಿತ ಮಹಿಳೆ ಗೋಶಾಲೆಯಲ್ಲಿ ಸಚಿವ ಕೋಟ ಗೋಪೂಜೆ

ಉಡುಪಿ : ದೊಡ್ಡಣಗುಡ್ಡೆ  ಅಂಬೇಡ್ಕರ್ ಕಾಲೊನಿಯಲ್ಲಿ ಕೇವಲ ಮೂರು ಸೆಂಟ್ಸ್ ಜಾಗದಲ್ಲಿ ಸುಮಾರು 60  ದೇಶಿ ಹಸುಗಳನ್ನು ಪೋಷಿಸುತ್ತಿರುವ ದಲಿತ ಮಹಿಳೆ ಕಮಲಮ್ಮ ಅವರ ಗೋಶಾಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ  ಬಲಿಪಾಡ್ಯ ಅಂಗವಾಗಿ ಶುಕ್ರವಾರ ಗೋ ಪೂಜೆ ನೆರವೇರಿಸಿದರು.

ಗೋಪೂಜಾ ಸಂಕಲ್ಪ ವಿಧಿ ನೆರವೇರಿಸಿದ ಬಳಿಕ
ಗೋವಿನ ಪದಕ್ಕೆ ನೀರೆರೆದು, ಹಣೆಗೆ ಅರಶಿನ‌ಕುಂಕುಮ ಹಚ್ಚಿ , ಮೈಮೇಲೆ ಸೀರೆ ರವಿಕೆ ಕಣ ಪುಷ್ಪ ಮಾಲೆ ಹಾಕಿ  , ಅವಲಕ್ಕಿ ,ಅರಳು ಮಿಶ್ರಿತ ಕಜ್ಜಾಯವನ್ನು ಅರ್ಪಿಸಿ ಮಂಗಳಾರತಿ ಬೆಳಗಿದರು.

ಸಚಿವರ ಅಚ್ಚರಿ
ಕೇವಲ ಮೂರು ಸೆಂಟ್ಸ್ ಜಾಗದಲ್ಲಿ ಇಷ್ಟೊಂದು ಹಸುಗಳನ್ನು ಯಾವುದೇ ಲಾಭವಿಲ್ಲದೇ ಸಾಕುತ್ತಿರುವ ಕಮಲಮ್ಮ ನ ಸಾಹಸ ಕಂಡು ಅಚ್ಚರಿಯಾಗಿದೆ.  ಗೋಶಾಲೆಯ ಸುರಕ್ಷತೆಗೆ ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸುವಂತೆ ಶಾಸಕರು ಮನವಿ ಮಾಡಿದ್ದಾರೆ . ಈ  ಬಗ್ಗೆ ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಪುರೋಹಿತ ಪದ್ಮನಾಭ ಆಚಾರ್ಯ ಅವರು ಪೂಜಾವಿಧಿ ನೆರವೇರಿಸಿದರು.  ಹಸುಗಳಿಗೆ ಗೋಗ್ರಾಸ ನೀಡಲಾಯಿತು. ನಂತರ ಸಾಮೂಹಿಕ ಪ್ರಾರ್ಥನೆ ನಡೆಯಿತು.

ಬಳಿಕ ಇಲಾಖೆ ವತಿಯಿಂದ ಕಮಲಮ್ಮ ಮತ್ತು ಅವರ ಮಗನಿಗೆ ಸಚಿವರು ದೀಪಾವಳಿ ಪ್ರಯುಕ್ತ ಹೊಸ ಬಟ್ಟೆ ಮತ್ತು ಸಿಹಿತಿಂಡಿಯನ್ನು ನೀಡಿದರು. ಹಸುಗಳಿಗೆ  ಒಂದು ಕ್ವಿಂಟಾಲ್  ಹಿಂಡಿ ಕೊಡುಗೆಯಾಗಿ ನೀಡಲಾಯಿತು.

ಶಾಸಕ ರಘುಪತಿ ಭಟ್, ಜಿ.ಪಂ ಮಾಜಿ‌ ಅಧ್ಯಕ್ಷ ದಿನಕರ ಬಾಬು , ನಗರ ಸಭಾ ಸದಸ್ಯರಾದ ಗಿರಿಧರ ಆಚಾರ್ಯ , ಪ್ರಭಾಕರ ಪೂಜಾರಿ , ಪ್ರೊ ಸದಾಶಿವ ರಾವ್ , ಎಸ್. ವಿ ಭಟ್  ಉಪಸ್ಥಿತರಿದ್ದರು . ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಹಾಗೂ ಸಚಿವರ ಆಪ್ತ ಕಾರ್ಯದರ್ಶಿ ಸುರೇಶ್ ಪೂಜಾರಿ ಪೇತ್ರಿ ಕಾರ್ಯಕ್ರಮ ಸಂಯೋಜಿದರು.   ಕಾಲೋನಿ ನಿವಾಸಿಗಳಿಗೆ ಸಿಹಿ ವಿತರಿಸಲಾಯಿತು.