ತುಮಕೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚುನಾವಣಾ ಮ್ಯಾಚ್ಫಿಕ್ಸಿಂಗ್ ಜಗದ್ಗುರು ಎಂದು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಸುರೇಶ್ಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.
ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡುವುದರಲ್ಲಿ ಮಾಜಿ ಶಾಸಕ ಗೌರಿಶಂಕರ್ ನಿಸ್ಸೀಮರು. ಅವರು ಮೂರು ಪಕ್ಷಗಳನ್ನು ಕಂಡು ಬಂದಿದ್ದಾರೆ. ಪರಮೇಶ್ವರ್ ಕೊರಟಗೆರೆ ಕ್ಷೇತ್ರದಲ್ಲಿ ಮಾಜಿ ಸಚಿವ ಚನ್ನಿಗಪ್ಪ ಸಹಕಾರ ಪಡೆಯಲು ಗ್ರಾಮಾಂತರ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಹೊಂದಾಣಿಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಜೆಡಿಎಸ್ ಅಭ್ಯರ್ಥಿ ಆಗಿದ್ದ ಗೌರಿಶಂಕರ್ ಜತೆ ಕೈಜೋಡಿಸಿದ್ದರು ಎಂಬುದು ಜಗಜ್ಜಾಹಿರಾದ ವಿಷಯ. ಮ್ಯಾಚ್ಫಿಕ್ಸಿಂಗ್ನಲ್ಲಿ ಪರಮೇಶ್ವರ್ ಅವರು ಗೌರಿಶಂಕರ್ರ ಜಗದ್ಗುರುಗಳು ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ಪರಮೇಶ್ವರ್, ರಾಜಣ್ಣ, ಗೌರಿಶಂಕರ್ ಆಗಲಿ ನನಗೆ ವೈಯಕ್ತಿಕವಾಗಿ ಯಾರ ಜತೆ ವೈಷಮ್ಯವಿಲ್ಲ. ವಿರೋಧ ಪಕ್ಷದಲ್ಲಿದ್ದಾಗ ನಾವು ಆಡಳಿತ ಪಕ್ಷದಲ್ಲಿದ್ದವರನ್ನು ಟೀಕೆ ಮಾಡಲೇಬೇಕಾಗುತ್ತದೆ. ಪರಮೇಶ್ವರ್ ಜಿಲ್ಲಾ ಉಸ್ತುವಾರಿ ಸಚಿವರು. ಆ ಕಾರಣಕ್ಕೆ ನಾನು ಟೀಕಿಸಿದ್ದಾನೆ. ನನ್ನೆಲ್ಲಾ ಟೀಕೆಗೆ ಅವರು ಉತ್ತರ ಕೊಡಬೇಕು. ಇಲ್ಲವಾದರೆ ತಪು$್ಪಗಳನ್ನು ಸರಿ ಮಾಡಬೇಕು. ಅವರಿಗೆ ಧೈರ್ಯವಿದ್ದರೆ ನೇರವಾಗಿ ನನ್ನ ವಿರುದ್ಧ ಸುದ್ದಿಗೋಷ್ಠಿ ನಡೆಸಬೇಕು. ಅದನ್ನು ಬಿಟ್ಟು ತಮ್ಮ ಚೇಲಾಗಳನ್ನು ಅದಕ್ಕೆ ಬಳಸಿಕೊಳ್ಳಬಾರದು. ಇದು ವೀರರ ಲಕ್ಷಣ ಅಲ್ಲ, ಇದು ಹೇಡಿಗಳ ಲಕ್ಷಣ ಎಂದು ನಾನು ಹೇಳುವುದಿಲ್ಲ. ಅದನ್ನು ಜನರ ತೀರ್ಮಾನಕ್ಕೆ ಬಿಡುವೆ ಎಂದು ಟಾಂಗ್ ಕೊಟ್ಟರು.
ಸಚಿವ ಕೆ.ಎನ್.ರಾಜಣ್ಣನನ್ನು ಕೆಣಕಲಿ ಎಂದು ಕಾಂಗ್ರೆಸ್ ಮುಖಂಡರು ಸವಾಲು ಹಾಕಿದ್ದು ಇದು ಜಿಲ್ಲಾ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ. ನಾನು ಯಾರ ವಿರುದ್ಧ ಯಾವಾಗ ಮಾತನಾಡಬೇಕು ಎಂದು ಕಾಂಗ್ರೆಸ್ಸಿಗರು ನನಗೆ ಹೇಳಿ ಕೊಡಬೇಕಿಲ್ಲ.ಅವರು ಯಾರ ಮಾತು ಕೇಳಿ ನನ್ನ ವಿರುದ್ಧ ಸುದ್ದಿಗೋಷ್ಠಿ ಮಾಡಿದ್ದರು ಎಂಬುದನ್ನು ತಿಳಿಯದಷ್ಟು ದಡ್ಡನು, ಅಮಾಯಕನು ನಾನಲ್ಲ. ಪರಮೇಶ್ವರ್ ಜತೆ ಓಡಾಡುವುದೇ ಮುರಳೀಧರ ಹಾಲಪ್ಪನಿಗೆ ರೋಮಾಂಚನ. ಸದನದಲ್ಲಿ ಯಾವ್ಯಾವ ವಿಷಯವನ್ನು ನಾನು ಪ್ರಸ್ತಾಪಿಸಿರುವೆ ಎಂಬುದನ್ನು ತಿಳಿದು ನನ್ನ ವಿರುದ್ಧ ಮಾತನಾಡಲಿ ಎಂದರು.
ಪ್ರಯಾಗ್ ರಾಜ್ನಲ್ಲಿ ನಾನು ಪಾಪ ತೊಳೆದುಕೊಂಡಿದ್ದೇನೋ ಇಲ್ಲವೋ. ಅವರ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಕುಟುಂಬ ಸಮೇತ ಮುಳುಗಿಬಂದಿದ್ದಾರೆ. ಇನ್ನೂ ಈ ಸರ್ಕಾರದಲ್ಲಿ ಡಿಕೆಶಿ, ರಾಜಣ್ಣ, ಯತೀಂದ್ರ ಗೃಹಸಚಿವರಾಗಿದ್ದು ಪೊಲೀಸರಿಗೆ ಜನಸಾಮಾನ್ಯರೇ ರಕ್ಷಣೆ ಕೊಡಬೇಕಾದ ಸ್ಥಿತಿ ಇದೆ ಎಂದು ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್, ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ, ಶಿವಕುಮಾರ್, ಟಿ.ಆರ್.ಸದಾಶಿವಯ್ಯ ಮತ್ತಿತರರು ಹಾಜರಿದ್ದರು.