ವಿಜಯಪುರ: ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಪ್ರಸಿದ್ಧವಾಗಿರುವ ವಿಜಯಪುರ ಜಿಲ್ಲೆಯನ್ನು ಕೈಗಾರಿಕಾ ಸಂಸ್ಕೃತಿಯ ಜಿಲ್ಲೆಯನ್ನಾಗಿಸುವ ಸಂಕಲ್ಪ ತೊಟ್ಟಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ವಿಜಯಪುರವನ್ನು ಕೈಗಾರಿಕಾ ಸಂಸ್ಕೃತಿಯ ಜಿಲ್ಲೆಯನ್ನಾಗಿ ಮಾಡುವುದಕ್ಕಾಗಿ ಇಂಧನ ಕ್ಷೇತ್ರಗಳ ಸಾಧನಗಳು, ಯಂತ್ರಗಳು ಉಪಕರಣಗಳು, ನಾನ್-ಮೆಟಾಲಿಕ್ ಖನಿಜೋತ್ಪನ್ನಗಳು, ಕೃಷಿ ಮತ್ತು ಕೃಷಿ ಆಧಾರಿತ ಉತ್ಪನ್ನಗಳು, ನ್ಯೂಟಾಸುಟಿಕಲ್ಸ್ ಮೆಡಿಸಿನಲ್ ಮತ್ತು ಬೊಟಾನಿಕಲ್ ಉತ್ಪನ್ನಗಳು, ವಿಶೇಷ ಅಲಾಯ್ ಮತ್ತು ಲೋಹೋತ್ಪನ್ನಗಳು ಹೀಗೆ ಒಟ್ಟು 6 ವಲಯಗಳ ಕೈಗಾರಿಕಾ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಮುಳವಾಡ ಗ್ರಾಮದಲ್ಲಿ ಕೆಐಎಡಿಬಿ ವ್ಯಾಪ್ತಿಯಲ್ಲಿ ಉತ್ಪಾದನಾ ಕ್ಲಸ್ಟರ್ ಸ್ಥಾಪನೆಗೆ ಕ್ರಮ ವಹಿಸಲಾಗುವುದು. ಮುಖ್ಯವಾಗಿ ಪವನ ಮತ್ತು ಸೌರ ವಿದ್ಯುತ್ ಉತ್ಪಾದನೆಗೆ ಸೂಕ್ತವಾಗಿರುವ ನಮ್ಮ ಜಿಲ್ಲೆಯನ್ನು ಇವೆರಡೂ ವಲಯಗಳ ಉದಯೋನ್ಮುಖ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಈ ನಿಟ್ಟಿನಲ್ಲಿ ಸುಜ್ಞಾನ್ ಪವನ ವಿದ್ಯುತ್ ಘಟಕ ನಮ್ಮ ಜಿಲ್ಲೆಯಲ್ಲಿ 5000 ಮೆಗಾವ್ಯಾಟ್ ಸಾಮರ್ಥ್ಯದ ಘಟಕ ಪ್ರಾರಂಭಿಸಲು ತೀರ್ಮಾನಿಸಿದ್ದು, ಇದಕ್ಕಾಗಿ 100 ಎಕರೆ ಭೂಮಿ ನೀಡಲಾಗುವುದು ಎಂದರು.
ಇದೇ ರೀತಿ ರೆನೈಸಾನ್ಸ್ ಕಂಪೆನಿಯು ಸೋಲಾರ್ ಪ್ಯಾನಲ್ ಬಿಡಿಭಾಗಗಳ ತಯಾರಿಕಾ ಘಟಕವನ್ನು ವಿಜಯಪುರ ಜಿಲ್ಲೆಯಲ್ಲಿ 6,000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿ ಸ್ಥಾಪಿಸಲಿದೆ. ಇದು ಮುಂದಿನ ದಿನಗಳಲ್ಲಿ 20,000 ಮೆಗಾವ್ಯಾಟ್ ಮಟ್ಟವನ್ನು ಮುಟ್ಟಲಿದ್ದು, ಇದರಿಂದ ಗರಿಷ್ಠ 3,000 ಉದ್ಯೋಗ ಸೃಷ್ಟಿಯಾಗಲಿದೆ ಎಂದರು.
ವಿಜಯಪುರ ನಗರ ಹಾಗೂ ಸುತ್ತಲಿನ ಕೆರೆಗಳ ಅಭಿವೃದ್ಧಿಗೆ ಸಿಎಸ್‌ಆರ್ ಅನುದಾನ ಬಳಸಿಕೊಳ್ಳಲಾಗುತ್ತಿದೆ. ಭೂತನಾಳ ಕೆರೆ, ಬೇಗಂ ತಲಾಬ್, ಗೋಳಗುಮ್ಮಟ, ಇಬ್ರಾಹಿಂ ರೋಜಾ, ಕುಮಟಗಿ ಕೆರೆ, ಬೇಸಿಗೆ ಅರಮನೆ ಹಾಗೂ ಕರಾಡ ದೊಡ್ಡಿಯ ಮಾನವ ನಿರ್ಮಿತ ಆರಣ್ಯ ಪ್ರದೇಶ ಇವುಗಳನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ಮತ್ತು ಸಿಎಸ್‌ಆರ್ ಅನುದಾನದಲ್ಲಿ ಸುಂದರ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿ ಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ವಿಜಯಪುರ ಮಹಾನಗರ ಪಾಲಿಕೆಗೆ 150 ಕೋಟಿ ಅನುದಾನವು ಹಂಚಿಕೆಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ನಿರ್ವಹಣೆಯಲ್ಲಿ ಅಮೃತ-2.0 ಯೋಜನೆ ಅಡಿಯಲ್ಲಿ ಹಂಚಿಕೆಯಾಗಿರುವ 25 ಕೋಟಿ ಮೊತ್ತದ ಅನುದಾನದಲ್ಲಿ 20 ಕೋಟಿ ರೂಪಾಯಿಗಳನ್ನು ವ್ಯಯಿಸಿ, ಬೇಗಂ ತಲಾಬ್ ಹಾಗೂ ಭೂತನಾಳ ಕೆರೆಗಳ ಪುನಃಶ್ವೇತನ ಮತ್ತು ಸೌಂದರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲು ಹಾಗೂ 5 ಕೋಟಿ ರೂಪಾಯಿಗಳ ಮೊತ್ತದಲ್ಲಿ ವಿಜಯಪುರ ನಗರದಲ್ಲಿರುವ 10 ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಯನ್ನು ಕೈಕೊಳ್ಳಲು ಯೋಜಿಸಲಾಗಿದೆ ಎಂದರು.
ಶಾಲೆಗಳ ಕಟ್ಟಡ ದುರಸ್ಥಿ, ನಿರ್ಮಾಣ ಹಾಗೂ ಸ್ಮಾರ್ಟ್ ಕ್ಲಾಸ್ ಅಳವಡಿಕೆ ಮಾಡಲಾಗುತ್ತಿದೆ. 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಉತ್ತಮ ಸ್ಥಾನಗಳಿಸಲು ಸಹಕಾರಿಯಾಗುವಂತೆ ಹಲವಾರು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ವಿಜಯಪುರ ನಗರದಲ್ಲಿರುವ ಪಾರಂಪರಿಕ ಐತಿಹಾಸಿಕ ಸ್ಮಾರಕಗಳ ರಕ್ಷಣೆ ಹಾಗೂ ಜಿಲ್ಲೆಯಲ್ಲಿ ಅರಣ್ಯೀಕರಣ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆ-ರಾಜ್ಯಗಳ ಎಲ್ಲೆ ಮೀರಿ ಸಮಾನ ಮನಸ್ಕ ಪ್ರಕೃತಿ ಪ್ರೀಯರ ಭಾಗವಹಿಸುವಿಕೆಯ ಮೂಲಕ ವೃಕ್ಷಥಾನ್ ಹೆರಿಟೇಜ್ ರನ್-2024 ಮ್ಯಾರಾಥಾನ್ ಓಟವನ್ನು ಈಗಾಗಲೇ ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು ಎಂದರು.
ಜಿಲ್ಲಾಸ್ಪತ್ರೆಯ ಆವರಣದಲ್ಲಿ 10 ಹಾಸಿಗೆಯ ಕಣ್ಣಿನ ಶಸ ಚಿಕಿತ್ಸಾ ಘಟಕ, ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಘಟಕ, ಐಪಿಎಚ್‌ಎಲ್ ಪ್ರಯೋಗಶಾಲೆ, ಧೋಬಿಘಾಟ ಹಾಗೂ ಶವಾಗೃಹ ಪ್ರಾರಂಭಗೊಂಡಿದ್ದು, 50 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಹಾಗೂ ನಾಗರೀಕ ಸೌಲಭ್ಯ ವಸತಿ ನಿಲಯಗಳ ಕಾಮಗಾರಿ ಕೈಗೆತ್ತಿಕೊಳ್ಳಲು ಯೋಜಿಸಲಾಗಿದೆ ಎಂದರು.
ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ 10 ಎಕರೆ ನಿವೇಶನದ 200 ಲಕ್ಷ ರೂಪಾಯಿಗಳ ಅನುದಾನದೊಂದಿಗೆ ತಾಲೂಕು ಕ್ರೀಡಾಂಗಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಭೂತನಾಳ ಗ್ರಾಮದ 8 ಎಕರೆ 10 ಗುಂಟೆ ನಿವೇಶನದಲ್ಲಿ 735 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೈಕ್ಲಿಂಗ್ ವೆಲೋಡ್ರೋಮ್ ಕಾಮಗಾರಿ ಶೇ.96 ರಷ್ಟು ಪೂರ್ಣಗೊಂಡಿದೆ.
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಂಸದ ರಮೇಶ ಜಿಗಜಿಣಗಿ, ವಿಧಾನ ಪರಿಷತ್ ಶಾಸಕರಾದ ರವಿಕುಮಾರ ಎನ್, ಕೇಶವ ಪ್ರಸಾದ ಎಸ್, ಕನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ, ಮಹಾಪೌರ ಮೆಹೇಜ್‌ಬಿನ ಅಬ್ದುಲ್‌ರಜಾಕ್ ಹೊರ್ತಿ, ಉಪ ಮಹಾಪೌರ ದಿನೇಶ ಹಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕನಾನ್ ಅಬ್ದುಲ್ ಹಮೀದ್ ಮುಶ್ರೀಪ್, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಪಂ ಸಿಇಒ ರಿಷಿ ಆನಂದ, ಎಸ್‌ಪಿ ಲಕ್ಷ್ಮಣ ನಿಂಬರಗಿ ಮತ್ತಿತರರಿದ್ದರು.