ಚಿಕ್ಕಬಳ್ಳಾಪುರ: ಕಂದಾಯ ಇಲಾಖೆಯಲ್ಲಿ ಭೂ ದಾಖಲೆಗಳಿಗೆ ಸಂಬಂಧಿಸಿದಂತೆ ಅಕ್ರಮ ಪ್ರಕರಣಗಳ ಬಗ್ಗೆ ಕೃಷ್ಣ ಬೈರೇಗೌಡ ವಿವರಿಸಿದರು.
ಗುಡಿಬಂಡೆ ಪಟ್ಟಣದಲ್ಲಿ ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆಯು ಕೈಗೊಂಡಿದ್ದ ಭೂ ಸುರಕ್ಷಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಮೂಲ ದಾಖಲೆಗಳಿದ್ದರೆ ತಾನೇ ಅವ್ಯವಹಾರ ಗೊತ್ತಾಗುತ್ತದೆ ಎಂಬ ಭಾವನೆಯಲ್ಲಿ ಕೆಲವರು ದೇವನಹಳ್ಳಿಯ ಕಚೇರಿಗೆ ಬೆಂಕಿ ಹಾಕಿ ಸುಟ್ಟು ಹಾಕಿದರು. ಇದರಿಂದ ದಾಖಲೆ ಇಲ್ಲದವರಿಗೂ, ಇದ್ದವರಿಗೂ ಭದ್ರತೆ ಸಿಕ್ಕಿತು. ಇನ್ನು ಶಿಡ್ಲಟ್ಟದ ಅಧಿಕಾರಿಯೊಬ್ಬ ವಾರುಸುದಾರ ಇಲ್ಲದ ಜಮೀನಿನ ದಾಖಲೆಗೆ ತಾಯಿ ಹೆಸರನ್ನು ಸೇರಿಸಿ ಬಿಟ್ಟಿದ್ದ. ಇನ್ನು ಕೆಲವೆಡೆ ಅಧಿಕಾರಿಗಳೇ ಬೇರೆ ಬೇರೆ ಅನಧಿಕೃತ ಕಚೇರಿಗಳನ್ನು ಸ್ಥಾಪಿಸಿಕೊಂಡು ಹಣಕ್ಕೆ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಈಗಾಗಲೇ ತಿದ್ದುಪಡಿಯ ಬಹಳಷ್ಟು ನಕಲಿ ದಾಖಲೆಗಳು ಸರ್ಕಾರಿ ಕಚೇರಿಯಲ್ಲಿವೆ. ಈ ಪೈಕಿ ದೂರುಗಳು ಕೇಳಿ ಬಂದ ಕಡೆ ದಾಖಲೆಗಳನ್ನು ಪರಿಶೀಲನೆಗೆ ಪ್ರೋರೆನ್ಸಿಕ್ ಪ್ರಯೋಗಾಲಯಕ್ಕೆ ಕಳುಹಿಸಿ, ವರದಿ ಪಡೆಯಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
*20 ಲಕ್ಷ ಜಾಗ ಪೋಡಿ ಆಗಿಲ್ಲ.
ಕೋಲಾರ, ರಾಮನಗರ, ಚಿತ್ರದುರ್ಗ, ತುಮಕೂರು, ಹಾಸನ , ಮಂಡ್ಯ, ಮೈಸೂರು ಸೇರಿದಂತೆ ವಿವಿಧ ಭಾಗಗಳಲ್ಲಿ ದರಖಾಸ್ತಿನಲ್ಲಿ ಮಂಜೂರಾದ ಜಮೀನಿನ ದುರಸ್ತಿಯೇ ಆಗಿಲ್ಲ. ರಾಜ್ಯದಲ್ಲಿ 20 ಲಕ್ಷ ರೈತ ಕುಟುಂಬಗಳಿಗೆ ಪೋಡಿ ಮಾಡಿಕೊಡಬೇಕಾಗಿದೆ. ಇದಕ್ಕೆ ಸರ್ಕಾರವು ಕಳೆದ ಒಂದು ವರೆ ತಿಂಗಳಿಂದ ನನ್ನ ಭೂಮಿ ಅಭಿಯಾನದಡಿ ಒನ್ ಟು ೈವ್ ದಾಖಲೆಗಳನ್ನು ಉಚಿತವಾಗಿ ನೀಡುತ್ತಿದೆ. ಇವುಗಳಲ್ಲಿ 50 ವರ್ಷದ ಹಿಂದೆ ಮಂಜೂರಾತಿ ಜಮೀನುಗಳಿಗೆ ಸಂಬಂಧಿಸಿದ್ದವು ಇವೆ ಎಂದು ಕಂದಾಯ ಸಚಿವರು ತಿಳಿಸಿದರು.
ಭೂ ದಾಖಲೆಗಳ ಗಣಕೀರಣವು ಪ್ರಕ್ರಿಯೆಯನ್ನು 2012 ರಲ್ಲಿಯೇ ಘೋಷಿಸಲಾಗಿತ್ತು. ಆದರೆ, ಇದರ ಕಡೆ ಹಿಂದಿನ ಸರ್ಕಾರಗಳು ಮಾತ್ರ ಗಮನಹರಿಸಲಿಲ್ಲ. ಒಂದು ವೇಳೆ ತ್ವರಿತವಾಗಿ ಚಾಲನೆ ಪಡೆದಿಕೊಂಡಿದ್ದಲ್ಲಿ ಬಹಳಷ್ಟು ಅಕ್ರಮಗಳಿಗೆ ಕಡಿವಾಣ ಬೀಳುತ್ತಿತ್ತು ಎಂದರು.
*ಕೇಸುಗಳ ತ್ವರಿತ ಇತ್ಯರ್ಥ
ನಿಯಮಾನುಸಾರ ದಾಖಲಾದ ಭೂ ಪ್ರಕರಣಗಳು ತಹಸೀಲ್ದಾರ್ ಕಚೇರಿಯಲ್ಲಿ 3 ತಿಂಗಳು, ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ 6 ತಿಂಗಳೊಳಗೆ ಇತ್ಯರ್ಥಗೊಳ್ಳಬೇಕು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ತಾಲೂಕು ಕಚೇರಿಯಲ್ಲಿನ 3 ತಿಂಗಳಿಗೂ ಮೀರಿದ 10774 ಕೇಸುಗಳು ಬಾಕಿ ಇದ್ದವು. ಈಗ 409 ಕ್ಕೆ ಇಳಿದಿದೆ. ಹಾಗೆಯೇ ಎಸಿ ಕಚೇರಿಯಲ್ಲಿ 1 ವರ್ಷಕ್ಕೂ ಮೀರಿದ 59,335 ಕೇಸುಗಳ ಸಂಖ್ಯೆಯು 22,406 ಕ್ಕೆ ಇಳಿದಿದೆ. ಮುಂಬರುವ 6 ತಿಂಗಳಲ್ಲಿ ಎಲ್ಲವೂ ಇತ್ಯರ್ಥಗೊಂಡಿರುತ್ತದೆ ಎಂದು ಕಂದಾಯ ಸಚಿವರು ಸರ್ಕಾರದ ಸಾಧನೆಯನ್ನು ಕೊಂಡಾಡಿದರು.