ಜಿಲ್ಲೆ

3 ತಿಂಗಳೊಳಗಾಗಿ ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿ ಪೂರ್ಣಗೊಳ್ಳಲಿ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಆರ್.ಪಾಟೀಲ್ ಸೂಚನೆ

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿಗಳು 3 ತಿಂಗಳೊಳಗಾಗಿ ಪೂರ್ಣಗೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ್ ಸೂಚನೆ ನೀಡಿದರು.

ನಗರದ ಮಿಮ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಯಾನ್ಸರ್ ಆಸ್ಪತ್ರೆಯ ಸಿವಿಲ್ ಕಾಮಗಾರಿಗಳು ಒಂದು ತಿಂಗಳೊಳಗೆ ಪೂರ್ಣಗೊಳಿಸವೇಕು. ಆಸ್ಪತ್ರೆಗೆ ಅವಶ್ಯವಿರುವ ವೈದ್ಯಕೀಯ ಉಪಕರಣಗಳು ಹಾಗೂ ಇನ್ನಿತರ ಟೇಬಲ್, ಚೇರ್, ಬೆಡ್ ವಿದ್ಯುತ್ ಸಂಪರ್ಕ ಇತ್ಯಾದಿ ಕೆಲಸಗಳು 3 ತಿಂಗಳೊಳಗೆ ಪೂರ್ಣಗೊಳ್ಳಬೇಕು. ಅಷ್ಟರಲ್ಲಿ ಆಸ್ಪತ್ರೆಗೆ ಬೇಕಿರುವ ವೈದ್ಯರು ಹಾಗೂ ಇನ್ನಿತರ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಪಡೆದು ಕಾರ್ಯಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಎಂಆರ್‌ಐ ಹಾಗೂ ಸಿ.ಟಿ. ಸ್ಕ್ಯಾನ್ ಆದ ನಂತರ ರೋಗಿಗಳ ವರದಿ ನೀಡಲು ಮೂರರಿಂದ ಐದು ದಿನ ಆಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದೆ. ಖಾಲಿ ಇರುವ ರೆಡಿಯಾಲಾಜಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಿ ಟೆಲಿ ಸರ್ವಿಸ್ ಉಪಯೋಗಿಸಿಕೊಂಡು ಒಂದು ದಿನದೊಳಗಾಗಿ ವರದಿ ನೀಡುವ ವ್ಯವಸ್ಥೆ ಮಾಡಿ. ಹೊರಗುತ್ತಿಗೆ ಮೇಲೆ ಲ್ಯಾಬ್ ಸೇವೆ ಒದಗಿಸುತ್ತಿರುವ ಸಂಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೆಚ್ಚಿನ ದರ ವಿಧಿಸುತ್ತಿದ್ದಾರೆ ಎಂದು ದೂರು ಕೇಳಿ ಬರುತ್ತಿದ್ದು, ಇದನ್ನು ಪರಿಶೀಲಿಸಿ ತಪ್ಪು ಕಂಡು ಬಂದಲ್ಲಿ ಟೆಂಡರ್ ರದ್ದುಪಡಿಸಿ ಎಂದು ತಿಳಿಸಿದರು.

ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವ ಸಿಬ್ಬಂದಿ ಖಾತೆಗೆ ಸರಿಯಾಗಿ ಸಂಬಳ, ಪಿಎಫ್ ಜಮೆಯಾಗುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಿ. ಇದರ ಬಗ್ಗೆ ದೂರುಗಳು ಕೇಳಿಬಂದಲ್ಲಿ ಶಿಸ್ತು ಕ್ರಮ ವಹಿಸಲಾಗುವುದು. ವೈದ್ಯರು ತಮ್ಮ ಕಾಲೇಜಿನ ಕೆಲಸ ನಿರ್ವಹಿಸಬೇಕಿರುವ ಸಮಯದಲ್ಲಿ ಹೊರಗೆ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಲ್ಲಿ ಕಾರ್ಯನಿರ್ವಹಿಸುವಂತಿಲ್ಲ. ಇದು ಕಂಡುಬಂದರೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ ಸಚಿವರು, ಇನ್ನು ಮುಂದೆ ಮಧ್ಯಾಹ್ನದ ವೇಳೆ ಸಹ ಈ ಹಾಜರಾತಿ ಸಂಗ್ರಹಿಸಲು ತಿಳಿಸಲಾಗುವುದು ಎಂದರು.

ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ತಾಲೂಕಿನ ಬಿ.ಹೊಸೂರಿನಲ್ಲಿ ನರ್ಸಿಂಗ್, ಪ್ಯಾರಾಮೆಡಿಕಲ್ ಕಾಲೇಜು ಮತ್ತು ಹಾಸ್ಟೆಲ್‌ಗೆ ಸ್ಥಳದ ವ್ಯವಸ್ಥೆ ಮಾಡಿಕೊಡಲಾಗುವುದು. ಇದಕ್ಕೆ ಯೋಜನೆ ರೂಪಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.

ವರ್ಚುಯಲ್ ಡಿಸೆಕ್ಷನ್ ಟೇಬಲ್‌ಗೆ ಚಾಲನೆ:

ವೈದ್ಯಕೀಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2.50 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗಿರುವ ಅನಾಟಮಿ ವರ್ಚುಯಲ್ ಡಿಸೆಕ್ಷನ್ ಟೇಬಲ್‌ಗೆ ಇದೇ ವೇಳೆ ಸಚಿವರು ಚಾಲನೆ ನೀಡಿದರು. ಸಭೆಯಲ್ಲಿ ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ.ಸುಜಾತಾ, ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಇತರರಿದ್ದರು.