ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಮಾಜಿ ಎಂಎಲ್ಸಿ ಹರೀಶ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ಪ್ರಮುಖರು ಇದ್ದರು. 
ಜಿಲ್ಲೆ

ಸುಳ್ಯ ಆಸ್ಪತ್ರೆಗೆ ಶೀಘ್ರ ವೈದ್ಯರ ನೇಮಕ

ವಿಜಯವಾಣಿ ಸುದ್ದಿಜಾಲ ಸುಳ್ಯ

ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡುವ ಸಂದರ್ಭ ಸುಳ್ಯದ ಸರ್ಕಾರಿ ಆಸ್ಪತ್ರೆಯನ್ನೂ ಪರಿಗಣಿಸಲಾಗುತ್ತದೆ. ಅಲ್ಲಿಯ ತನಕ ಹಾಲಿ ವೈದ್ಯರು ಅನಿವಾರ್ಯವಾಗಿ ಸೇವೆ ಮುಂದುವರಿಸಬೇಕು ಎಂದು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಶನಿವಾರ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು. ಜಿಲ್ಲಾ ಆರೋಗ್ಯಾಧಿಕಾರಿ ತಿಮ್ಮಯ್ಯ, ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ಕೆ.ವಿ ಆಸ್ಪತ್ರೆಯ ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ನಗರ ಪಂಚಾಯಿತಿ ಸದಸ್ಯ ಎಂ.ವೆಂಕಪ್ಪ ಗೌಡ ಮುಖಂಡರಾದ ನಿತ್ಯಾನಂದ ಮುಂಡೋಡಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯವೈಖರಿ ಪರಿಶೀಲನೆ

ಸರ್ಕಾರಿ ಅಸ್ಪತ್ರೆಯ ಡಯಾಲಿಸಿಸ್ ವಿಭಾಗ, ಐಸಿಯು, ಹೊರ ರೋಗಿ ವಿಭಾಗ, ವಾರ್ಡ್‌ಗೆ ದಿನೇಶ್ ಗುಂಡೂರಾವ್ ಭೇಟಿಯಿತ್ತು ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಎಕ್ಸ್‌ರೇ ಸಹಿತ ಹಲವು ವಿಭಾಗಗಳಲ್ಲಿ ತಂತ್ರಜ್ಞರ ಹುದ್ದೆಗಳು ಖಾಲಿ ಇರುವ ಕುರಿತು ಸಚಿವರ ಗಮನಕ್ಕೆ ತರಲಾಗಿದ್ದು, ಶೀಘ್ರವೇ ನೇಮಕಾತಿ ನಡೆಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಪ್ರಸೂತಿ ತಜ್ಞರನ್ನೂ ಮುಂದಿನ ತಿಂಗಳ ಒಳಗೆ ನೇಮಕ ಮಾಡಿಕೊಳ್ಳುವ ಕುರಿತು ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದರು.