ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಹಾನಿ ಪ್ರಕರಣಗಳಲ್ಲಿ ವಿಳಂಬವಿಲ್ಲದೆ ಪರಿಹಾರ ಧನ ಪಾವತಿಸಬೇಕು. ಎಲ್ಲ ಹಾನಿ ಪ್ರಕರಣಗಳಲ್ಲಿ ವಿಳಂಬ ಮಾಡದೆ ಸಂತ್ರಸ್ತರಿಗೆ ಪರಿಹಾರ ಪಾವತಿ ಮಾಡಬೇಕು. ಇಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧದಲ್ಲಿ ಮಳೆ ಹಾನಿ ಕುರಿತು ಜಿಲ್ಲೆಯ ಉನ್ನತ ಅಧಿಕಾರಿಗಳ ಜತೆ ಅವರು ಸಭೆ ನಡೆಸಿದರು.
ಮಳೆ ಹಾನಿ ಕುರಿತು ಸಭೆಗೆ ಮಾಹಿತಿ ನೀಡಿದ ಅಧಿಕಾರಿಗಳು, ಈ ಬಾರಿ ಇದುವರೆಗೆ ವಾಡಿಕೆಗಿಂತ ಜಾಸ್ತಿ ಮಳೆಯಾಗಿದೆ. ಜಿಲ್ಲೆಯಲ್ಲಿ 82 ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 705 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. ಎಲ್ಲ ಪ್ರಕರಣಗಳಲ್ಲಿ ಪರಿಹಾರ ಪಾವತಿ ಆಗಿದೆ. ಆದರೆ ಪುತ್ತೂರಿನಲ್ಲಿ 25 ಮನೆಗಳಿಗೆ ಪರಿಹಾರ ಪಾವತಿ ಬಾಕಿ ಇದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರೀಯಿಸಿದ ಸಚಿವ ದಿನೇಶ್ ಗುಂಡೂರಾವ್, ಸಂಪೂರ್ಣವಾಗಿ ಹಾನಿಗೀಡಾದ ಮನೆಗಳಿಗೆ ಎನ್‌ಡಿಆರ್‌ಎಫ್ ನಿಧಿಯಿಂದ 1.20 ಲಕ್ಷ ರುಪಾಯಿ ಪರಿಹಾರ ಪಾವತಿ ಮಾಡಲಾಗುತ್ತದೆ. ಅಂಥವರಿಗೆ ಹೊಸ ಮನೆ ಕಟ್ಟಲು ರಾಜೀವ್ ಗಾಂಧಿ ವಸತಿ ಯೋಜನೆ ಸೇರಿದಂತೆ ಒಟ್ಟಾರೆಯಾಗಿ 2.70 ಲಕ್ಷ ರುಪಾಯಿ ಅನುದಾನ ದೊರೆಯುತ್ತದೆ. ಮನೆ ಕಳೆದುಕೊಂಡ ಸಂತ್ರಸ್ತರನ್ನು ರಾಜೀವ್ ಗಾಂಧಿ ವಸತಿ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಪ್ರಕ್ರಿಯೆ ನಡೆಸುವಂತೆ ಸೂಚಿಸಿದರು.
ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ವಾಹನ ಸಂಚಾರ ಮಾಡುವ ಕುರಿತು ತಜ್ಞರ ವರದಿಯನ್ನು ಆದಷ್ಟು ಬೇಗನೆ ಪಡೆದುಕೊಂಡು ಆ ವರದಿಯಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು. ಜಿಲ್ಲೆಯಲ್ಲಿ ವಿವಿಧ ಇಲಾಖೆ ವ್ಯಾಪ್ತಿಯ 19 ಕಡೆಗಳಲ್ಲಿ ಸೇತುವೆಗಳನ್ನು ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
*ಭೂಕುಸಿತ ಕುರಿತು ಚರ್ಚೆ
ವಾಮಂಜೂರು- ಗುರುಪುರ ನಡುವಿನ ರಾ.ಹೆದ್ದಾರಿಯ ಕೆತ್ತಿಕಲ್‌ನಲ್ಲಿ ಭಾರೀ ಭೂಕುಸಿತ ಕುರಿತು ಚರ್ಚೆ ನಡೆಯಿತು. ಮುಂದಿನ ಪರಿಹಾರ ಕಾಮಗಾರಿ ನಡೆಸಬೇಕಾದರೆ ಭೂಸ್ವಾಧೀನ ಮಾಡಬೇಕಿದೆ ಎಂದು ರಾ.ಹೆ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದರಿಂದ ಈ ಪ್ರಕ್ರಿಯೆಯನ್ನು ಆದಷ್ಟು ಬೇಗನೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಪಂ ಸಿಇಒ ಡಾ.ಆನಂದ್, ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಎಸ್ಪಿ ಡಾ.ಅರುಣ್ ಕೆ., ಡಿಎಫ್‌ಒ ಆಂಟನಿ ಮರಿಯಪ್ಪ ಇದ್ದರು.
------------------
ಭೂಕುಸಿತ ತಡೆಗೆ 100 ಕೋ.ರೂ. ಬಜೆಟ್
ಮಲೆನಾಡು ಮತ್ತೆ ಕರಾವಳಿ ಪ್ರದೇಶದಲ್ಲಿ ಭೂಕುಸಿತ ತಡೆಗಟ್ಟಲು 100 ಕೋಟಿ ರುಪಾಯಿ ಬಜೆಟ್ ಅನುದಾನ ಮೀಸಲಿರಿಸಲಾಗಿದ್ದು, ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 27 ಕೋಟಿ ರೂ.ಗಳ 36 ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಿಂದ ಭೂಕುಸಿತ ಸಂಭಾವ್ಯ ಪ್ರದೇಶಗಳನ್ನು ಗುರುತಿಸಿ ಈ ಕಾಮಗಾರಿಗಳ ಪಟ್ಟಿ ತಯಾರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.