ಮಂಗಳೂರು: ದ.ಕ.ಜಿಲ್ಲೆಯ ಜನತೆ ಪರಸ್ಪರ ಶಾಂತಿ, ಸೌಹಾರ್ದತೆಯಿಂದ ಬದುಕಬೇಕು ಎಂಬುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ಪೊಲೀಸರ ಕರ್ತವ್ಯದಲ್ಲಿ ಯಾವುದೇ ಒತ್ತಡ, ರಾಜಕೀಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶನಿವಾರ ಪೊಲೀಸ್ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಮಂಗಳೂರು ನಗರ ಹಾಗೂ ಗ್ರಾಮಾಂತರಕ್ಕೆ ಹೊಸ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ಅವರು ಸಾಕಷ್ಟು ಶ್ರಮಿಸುವ ವಿಶ್ವಾಸ ಇದೆ. ಭದ್ರತೆ ಮತ್ತು ಕಾನೂನು ಉಲ್ಲಂಘನೆ ವಿರುದ್ಧ ಯಾವುದೇ ರಾಜಿ ಇಲ್ಲದಂತೆ
ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ. ಸರ್ಕಾರದ ಕಡೆಯಿಂದ ಪೂರ್ಣ ಬೆಂಬಲ ನೀಡಲಾಗುವುದು. ಎಲ್ಲವನ್ನೂ ಕಾನೂನು ಪ್ರಕಾರ ಮಾಡುವಂತೆ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸೂಚಿಸಲಾಗಿದೆ. ಪಾರದರ್ಶಕ ವ್ಯವಸ್ಥೆಯಡಿ ಧೈರ್ಯದಿಂದ ಕೆಲಸ ಮಾಡುವಂತೆ ಹೇಳಿದ್ದೇನೆ ಎಂದರು.
ಕರಾವಳಿಯ ಶೇ.98 ಮಂದಿಗೆ ಶಾಂತಿ ಬೇಕು, ಶೇ. 2 ರಷ್ಟು ಮಂದಿಗೆ ಸ್ವಾರ್ಥ, ರಾಜಕೀಯ ಲಾಭ, ಸಂಘಟನೆಗಳ ಲಾಭಕ್ಕಾಗಿ ಅಶಾಂತಿಯನ್ನು ಉಂಟು ಮಾಡುತ್ತಿದ್ದಾರೆ. ಅದೇ ಸಾಧನೆ ಎಂದು ಮಾತನಾಡುತ್ತಾರೆಯೇ ವಿನಃ ಬೇರೇನೂ ಮಾಡುವುದಿಲ್ಲ. ಸಮಾಜದಲ್ಲಿ ಕಾನೂನು, ಸುವ್ಯವಸ್ಥೆ ಸ್ಥಾಪಿಸುವ ಬಗ್ಗೆ ಎಲ್ಲ ಸಮಾಜದ ಮುಖಂಡರನ್ನು ಆಹ್ವಾನಿಸಿ ಅಭಿಪ್ರಾಯ ಸಂಗ್ರಹಿಸುತ್ತೇವೆ.
ಎರಡು ಸಮುದಾಯದೊಳಗಿನ ಮನಸ್ತಾಪ ದೂರಗೊಳಿಸಿ ಬಂಧುತ್ವ ಗಟ್ಟಿಗೊಳಿಸಲು ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದು ಒಂದು ವಾರ, ಒಂದು ವರ್ಷದ ಕೆಲಸ ಅಲ್ಲ, ಶಾಶ್ವತವಾಗಿ ಕದಡಿದ ಮನಸ್ಸನ್ನು ಒಂದು ಮಾಡುವ ಕಾರ್ಯ ನಡೆಯಬೇಕು. ಶಾಂತಿ, ಸೌಹಾರ್ದತೆ ಮರು ಸ್ಥಾಪಿಸುವ ದೃಷ್ಟಿಯಲ್ಲಿ ಶೀಘ್ರವೇ ಶಾಂತಿ ಸಮಿತಿ ಸಭೆ ಕರೆಯಲಾಗುವುದು ಎಂದರು.
ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕ ಈ ಅಧಿಕಾರಿಗಳ ವರ್ಗಾವಣೆಯ ಪ್ರಶ್ನೆಯೇ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಡಾ.ಮಂಜುನಾಥ ಭಂಡಾರಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಉಪಸ್ಥಿತರಿದ್ದರು.