ಕಲಬುರಗಿ: ಚುನಾವಣೆಯಲ್ಲಿ ಘೋಷಿಸಿದಂತೆ ಗ್ಯಾರಂಟಿಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ್ದರಿಂದ ಉಳಿದಂತೆ ಕೈಗೆತ್ತಿಕೊಳ್ಳುವ ಅಭಿವೃದ್ಧಿ ಯೋಜನೆಗಳ ಮೇಲೆ ಯಾವುದೇ ಪರಿಣಾಮ ಬೀರಲ್ಲ, ಬದಲಿಗೆ ಹಿಂದಿನ ಕಮಿಷನ್ ಸರ್ಕಾರಕ್ಕಿಂತ ಹತ್ತಾರು ಪಟ್ಟು ಪ್ರಗತಿಪರ ಕೆಲಸಗಳನ್ನು ಕಾಂಗ್ರೆಸ್ ಸರ್ಕಾರ ಮಾಡಲಿದೆ. ನಾಡಿನ ಸಮಗ್ರ ಪ್ರಗತಿಯೇ ನಮ್ಮ ಗುರಿ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಸಚಿವರಾದ ಬಳಿಕ ಮೊದಲ ಸಲ ಶನಿವಾರ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸ್ವಾಗತಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲ್ಲ ತೆರನಾಗಿ ಯೋಚನೆ ಮಾಡಿಯೇ ಮುಖ್ಯಮಂತ್ರಿ ಮತ್ತುಉಪ ಮುಖ್ಯಮಂತ್ರಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದರು.
ಆಯವ್ಯಯದ ಲೆಕ್ಕಾಚಾರದಂತೆ ಸಂಪನ್ಮೂಲ ಕ್ರೋಢಿಕರಣಕ್ಕೆ ಸರ್ಕಾರ ಪರ್ಯಾಯ ಯೋಚನೆ ಮಾಡಿದೆ. ಅನುದಾನವನ್ನು ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಗ್ಯಾರಂಟಿ ಯೋಜನೆಗಳಿಗೆ ನೀಡಲಾಗುವುದು. ಆರ್ಥಿಕ ದಿವಾಳಿತನದ ಪ್ರಶ್ನೆಯೇ ಉದ್ಭವಿಸಲ್ಲ. ಆಯಾ ಇಲಾಖೆಗಳಿಂದ ಕೈಗೆತ್ತಿಕೊಳ್ಳುವ ಅಭಿವೃದ್ಧಿ ಕಾರ್ಯಕ್ರಮಗಳು ನಿರಂತರ ನಡೆಯಲಿವೆ ಎಂದು ತಿಳಿಸಿದರು.
ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳನ್ನು ಸರ್ಕಾರ ಜಾರಿಗೊಳಿಸಿ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಇದರಿಂದಾಗಿ ಲಕ್ಷಾಂತರ ಕುಟುಂಬಗಳು, ಮಹಿಳೆಯರಿಗೆ ಅನುವು ಆಗಲಿದೆ. ಪ್ರತಿಪಕ್ಷದವರು ಕಾಟಾಚಾರಕ್ಕೆ ಟೀಕಿಸಬೇಕು ಎಂದು ಟೀಕಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.