ಜಿಲ್ಲೆ

ಅಕಾಡೆಮಿಗಳಿಗೆ ಹೆಚ್ಚಿನ ಅನುದಾನ ಕೋರುವೆ

ಚಿಕ್ಕಮಗಳೂರು: ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಹೆಚ್ಚಿನ ಹಣ ಒದಗಿಸುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೋರುವುದಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ತಿಳಿಸಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಎಂ.ಬೋಬೇಗೌಡ ವಿರಚಿತ ಸುಚೇತನ ಪ್ರಕಾಶನದ ಹೊಂಗ್ಯಾದಿಗೆ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಪುಸ್ತಕ ಪ್ರಕಟಣೆ ಸಾಹಸದ ಕೆಲಸವಾಗಿದ್ದು, ಸಾಲ ಮಾಡಿ ಪುಸ್ತಕ ಪ್ರಕಟಿಸಿದರೆ ಸಮಸ್ಯೆ ಅನುಭವಿಸಬೇಕಾಗುತ್ತದೆ ಎನ್ನುವ ಅಭಿಪ್ರಾಯವಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಆಯ್ದ ಪುಸ್ತಕಗಳನ್ನು ಖರೀದಿಸುವ ಕೆಲಸ ಮಾಡುತ್ತಿದೆ. ಜನಸಂಖ್ಯೆ ಹೆಚ್ಚಿರುವ ನಮ್ಮ ದೇಶದಲ್ಲಿ ಬರೆಯುವವರ ಸಂಖ್ಯೆ ಕಡಿಮೆಯೇನಿಲ್ಲ. ಆದರೆ ಯೋಗ್ಯವಾದವನ್ನು ಗುರುತಿಸಿ ಪ್ರಕಟಿಸುವುದು ಪ್ರಾಧಿಕಾರದ ಕಾರ್ಯ ಎಂದರು.

ಈ ಬಾರಿ ಎಲ್ಲ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಹೆಚ್ಚಿನ ಅನುದಾನ ಕೊಡಬೇಕೆಂಬ ಆಲೋಚನೆ ಇತ್ತು. ಮುಖ್ಯಮಂತ್ರಿ ನಮ್ಮ ಇಲಾಖೆಗೆ ಹೆಚ್ಚಿನ ಅನುದಾನ ಒದಗಿಸಿದ್ದರೂ ಅಕಾಡೆಮಿ, ಪ್ರಾಧಿಕಾರಗಳ ಚಟುವಟಿಕೆಗೆ ಹಾಗೂ ಸಂಘ, ಸಂಸ್ಥೆಗಳಿಗೆ ಪ್ರೋತ್ಸಾಹಧನ ಕಡಿತಗೊಳಿಸಿದ್ದಾರೆ. ಈ ವಿಚಾರ ಮೊನ್ನೆಯಷ್ಟೆ ನನ್ನ ಗಮನಕ್ಕೆ ಬಂದಿದ್ದು, ಈ ಕುರಿತು ಮುಖ್ಯಮಂತ್ರಿ ಜತೆ ಸಮಾಲೋಚಿಸಿ ಇವುಗಳಿಗೆ ಇನ್ನಷ್ಟು ಶಕ್ತಿ ತುಂಬಬೇಕು. ಹೆಚ್ಚು ಕೆಲಸ ಮಾಡುವಂತಾಗಬೇಕಾದರೆ ಅಗತ್ಯವಿರುವಷ್ಟು ಸಂಪನ್ಮೂಲ ಒದಗಿಸಬೇಕು. ಬಜೆಟ್ ಪೂರ್ವ ಸಭೆಗಳಲ್ಲಿ ಈ ಬಗ್ಗೆ ನಾನು ಮುಖ್ಯಮಂತ್ರಿ ಗಮನ ಸೆಳೆದಿದ್ದಾಗಿ ತಿಳಿಸಿದರು.

ಬಜೆಟ್​ನಲ್ಲಿ ನಾಲ್ಕು ಹೊಸ ರಂಗಮಂದಿರಗಳಿಗೆ ಹಣ ನೀಡಿದ್ದು, ಲಂಬಾಣಿ ಅಕಾಡೆಮಿ, ಭಾಷಾ ಮತ್ತು ಸಂಸ್ಕೃತಿ ಅಕಾಡೆಮಿ ರಚಿಸಲು ಹಣ ಒದಗಿಸಿದ್ದಾರೆ. ಆದರೆ ಅಕಾಡೆಮಿ, ಪ್ರಾಧಿಕಾರಕ್ಕೆ ಅನುದಾನ ಕಡಿತವಾಗಿರುವುದು ಮುಖ್ಯಮಂತ್ರಿ ಗಮನಕ್ಕೆ ಬಂದಿದೆಯೋ, ಇಲ್ಲವೊ ಗೊತ್ತಿಲ್ಲ. ಕೆಲವೊಮ್ಮೆ ಅಧಿಕಾರಿಗಳ ಮಟ್ಟದಲ್ಲಿ ಅನುದಾನ ಹೊಂದಾಣಿಕೆ ಮಾಡುವಾಗ ಈ ರೀತಿ ಆಗುತ್ತದೆ. ಈ ಬಗ್ಗೆ ಸಿಎಂ ಗಮನ ಸೆಳೆಯುವುದಾಗಿ ಹೇಳಿದರು.

ಗ್ರಾಮೀಣ ಬದುಕನ್ನು ಸ್ವತಃ ಅನುಭವಿಸಿದ್ದನ್ನೇ ಬರೆದಾಗ ಅದಕ್ಕೆ ಹೆಚ್ಚು ಸಾಮರ್ಥ್ಯವಿರುತ್ತದೆ. ಲೇಖಕರು ಇದಕ್ಕೆ ಆದ್ಯತೆ ನೀಡಬೇಕು ಎಂದರು.

ಕುವೆಂಪು ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಬಸವರಾಜ ನೆಲ್ಲಿಸರ ಮಾತನಾಡಿ, ಆಧುನಿಕ ಸಮಾಜದಲ್ಲಿ ಮೂಲ ಭಾಷೆಗೆ ಧಕ್ಕೆಯಾಗುತ್ತಿದೆ. ನಾವು ಗ್ರಾಮೀಣ ಭಾಷೆ ಕೈಬಿಟ್ಟು ಇಂಗ್ಲಿಷ್ ಭಾಷೆ ವ್ಯಾಮೋಹಕ್ಕೆ ಒಳಗಾಗಿದ್ದೇವೆ. ನಮ್ಮ ಪೂರ್ವಿಕರು ಉಳಿಸಿ ಬೆಳೆಸಿಕೊಂಡು ಬಂದ ಮೂಲ ಕಲೆಗಳನ್ನು ಮರೆತಿದ್ದೇವೆ. ಬೋಬೇಗೌಡರು ಗ್ರಾಮೀಣ ಸೊಗಡನ್ನು ತಮ್ಮ ಕೃತಿಯಲ್ಲಿ ಎತ್ತಿ ಹಿಡಿದಿದ್ದಾರೆ. ಹಿಂದಿನವರು ಊರಿನಲ್ಲಿ ನಡೆಸುತ್ತಿದ್ದ ಹಬ್ಬ, ಸುಗ್ಗಿಹಬ್ಬ, ಮದುವೆ, ಜಾತ್ರೆ ಬಗ್ಗೆ ಪುಸ್ತಕದಲ್ಲಿ ತಿಳಿಸಿದ್ದಾರೆ ಎಂದರು.

ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ನಮ್ಮ ಜನಪದ ಕಲೆಯ ತಳಹದಿ ಮೇಲೆ ಭಾರತೀಯ ಸಂಸ್ಕೃತಿ ನಿಂತಿದೆ. ದೇಶ ವಿವಿಧತೆಯಲ್ಲಿ ಏಕತೆ ಸಾಧಿಸಲು ನಮ್ಮ ಜನಪದ ಸಂಸ್ಕೃತಿಯೇ ಮೂಲ ಕಾರಣ ಎಂದು ಹೇಳಿದರು.

ಐಡಿಎಸ್​ಜಿ ಕಾಲೇಜಿನ ಪ್ರಾಧ್ಯಾಪಕ ಡಾ. ಎಚ್.ಎಂ.ಮಹೇಶ್ ಕೃತಿಯ ಬಗ್ಗೆ ಪರಿಚಯಿಸಿ, ಬೋಬೇಗೌಡರ ಕೃತಿ ಸ್ವಾರಸ್ಯಕರವಾಗಿದ್ದು, ಅಷ್ಟೇ ಸರಳವಾದ ಭಾಷೆಯಲ್ಲಿದೆ. ಹೊಂಗ್ಯಾದಿಗೆ ಶೇ.100 ರಷ್ಟು ಜಾನಪದಕ್ಕೆ ಸಂಬಂಧಿಸಿದ ಕೃತಿ. ಇಲ್ಲಿ ಬರುವ ಪಾತ್ರಗಳೆಲ್ಲವೂ ಮಲೆನಾಡಿನ ಮಳೆಯಲ್ಲಿ ಹೊಂಗ್ಯಾದಿಗೆಗಳೇ ಎಂದು ಹೇಳಿದರು.

ನಿವೃತ್ತ ಶಿಕ್ಷಕ ಲಕ್ಷ್ಮಣ ಗೌಡ, ಕಜಾಪ ನಿಕಟಪೂರ್ವ ಅಧ್ಯಕ್ಷ ಮಡ್ಡಿಕೆರೆ ಗೋಪಾಲ ಗೌಡ ಇದ್ದರು.