ಜಿಲ್ಲೆ

ಕ್ರಮವನ್ನು ನಾವು ಮಾಡಿಯೇ ತೀರುತ್ತೇವೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

ಮಂಡ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿಗೆ ದೊಡ್ಡ ಮುಖಭಂಗ. ಇಷ್ಟು ವರ್ಷ ಧರ್ಮಸ್ಥಳದ ಬಗ್ಗೆ ಮಾತನಾಡಲು ಬಿಟ್ಟಿದ್ದೆ ಮಹಾ ಅಪರಾಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಈಗ ಕಾನೂನಿನ ಕ್ರಮ ಆಗಬೇಕು ಎನ್ನುತ್ತಿದ್ದಾರೆ. ಹತ್ತಾರು ವರ್ಷದಿಂದ ಧರ್ಮಸ್ಥಳದ ಬಗ್ಗೆ ಅನೇಕರು ಮಾತನಾಡುತ್ತಿದ್ದರು. ಆಗೆಲ್ಲ ಬಿಜೆಪಿಯವರು ಎಲ್ಲಿ ಹೋಗಿದ್ದರು. ಇವರೇ ಆಡಳಿತ ಮಾಡುತ್ತಿದ್ದಾಗ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕಿತ್ತು. ಬಿಜೆಪಿ ಸರ್ಕಾರ ಇದ್ದಾಗ ಕಾಂಗ್ರೆಸ್‌ನವರು ಅವರ ಕೈಯನ್ನು ಹಿಡಿದುಕೊಂಡಿದ್ವಾ?. ಸೌಜನ್ಯಾ ಸಾವಾದಾಗ ಅಶೋಕ್ ಗೃಹಸಚಿವ ಎಂದು ಟೀಕಿಸಿದರು.

ತಿರುಪತಿ ಬಿಟ್ಟರೇ ಧರ್ಮಸ್ಥಳಕ್ಕೆ ಅತ್ಯಂತ ಹೆಚ್ಚು ಭಕ್ತರು ಇರುವುದು. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದ ವಿಚಾರದಲ್ಲಿ ಇಷ್ಟೊಂದು ಚರ್ಚೆಯಾಗಲು ಬಿಟ್ಟಿದ್ದೆ ಮಹಾ ಅಪರಾಧ. ಇದಕ್ಕೆ ಹಿಂದೆ ಬಿಜೆಪಿ ಸರ್ಕಾರದ ನಡವಳಿಕೆಯೆ ಕಾರಣ. ನಾವು ಎಸ್‌ಐಟಿ ರಚನೆ ಮಾಡಿದಾಗ ಯಾರು ಬೇಡ ಎನ್ನಲಿಲ್ಲ. ಬಾಯಿ ಮುಚ್ಕೊಂಡು ಸುಮ್ಮನೆ ಇದ್ದರು. ಅದೇ ಎಸ್‌ಐಟಿ ರಚನೆ ಮಾಡಿದ ಮೇಲೆ ಲಾಭ ಪಡೆಯಲು ಬಿಜೆಪಿಯವರು ಹೊರಟರು. ಡಾ.ವೀರೇಂದ್ರ ಹೆಗಡೆ ಅವರು ಸೇರಿ ಭಕ್ತರೆಲ್ಲ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ ಎಂದಿದ್ದರು. ಪಾಪ ಈಗ ಬಿಜೆಪಿಯವರು ಕ್ರಮ ಆಗಬೇಕು ಎನ್ನುತ್ತಿದ್ದಾರೆ. ಕ್ರಮವನ್ನು ನಾವು ಮಾಡಿಯೇ ತೀರುತ್ತೇವೆ. ಯಾವುದೇ ಧಾರ್ಮಿಕ ಸ್ಥಳದ ಮೇಲೆ ಈ ರೀತಿ ಮಾತನಾಡಲು ಬಿಡಲ್ಲ ಎಂದರು.

ಧರ್ಮಸ್ಥಳ ಪ್ರಕರಣವನ್ನ ಎನ್‌ಐಎಗೆ ವಹಿಸಬೇಕೆಂಬ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಿಂದೆ ಬಿಜೆಪಿಯವರು ಏಕೆ ಎನ್‌ಐಎಗೆ ವಹಿಸಬಾರದಿತ್ತು. ಆರ್.ಅಶೋಕ್ ಗೃಹ ಮಂತ್ರಿ ಇದ್ದರು. ಆಗಲೇ ಎನ್‌ಐಎಗೆ ಬರೆದು ಹಾಕಬೇಕಿತ್ತು. ಬಿಜೆಪಿಯವರನ್ನ ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಸಿಬಿಐ, ಎನ್‌ಐಎಯನ್ನ ನೋಡದೇ ಇರುವುದಲ್ಲ. ರಾಜ್ಯ ಮಟ್ಟದ ತನಿಖೆ ಸಂಸ್ಥೆ ಅವನ್ನೂ ಮೀರಿ ಲಿತಾಂಶ ಕೊಟ್ಟಿದೆ. ಅನೇಕ ಪ್ರಕರಣವನ್ನ ಸಿಬಿಐ, ಎನ್‌ಐಎಗೆ ಕೊಟ್ಟಿದ್ದೇವೆ, ಆದರೂ ರಿಸೆಲ್ಟ್ ಬಂದಿಲ್ಲ. ಆದರೆ ನಮ್ಮ ರಾಜ್ಯದ ತನಿಖಾ ಸಂಸ್ಥೆಗಳು ಅದಕ್ಕೆಲ್ಲ ಆದರ್ಶವಾಗಿದೆ. ಬಿಜೆಪಿಯವರ ಕಥೆ ಕುಣಿನಾರದವರು ನೆಲಡೊಂಕು ಅಂದಂಗೆ ಆಗಿದೆ. ಪಾಪ ಯಾವ ವಿಚಾರ ತೆಗೆದುಕೊಂಡರೂ ಸಕ್ಸಸ್ ಆಗುತ್ತಿಲ್ಲ. ಎಲ್ಲದರಲ್ಲೂ ಫೆಲ್ಯೂರ್ ಆಗುತ್ತಿದ್ದಾರೆ. ಆದ್ದರಿಂದ ಈಗೆಲ್ಲ ಮಾತನಾಡುತ್ತಿದ್ದು, ನನಗೂ ಅಯ್ಯೋ ಪಾಪ ಎನ್ನಿಸುತ್ತಿದೆ. ಏನೂ ಕೆಲಸ ಇದ್ದಾಗ ಅವರು ಹೋರಾಟ ಮಾಡಬೇಕು. ರಾಜಕಾರಣ ಬಿಟ್ಟು ಇನ್ನೇನು ಮಾಡುವುದಕ್ಕೆ ಆಗುತ್ತೆ. ಆದ್ದರಿಂದ ಬಿಜೆಪಿ ಇನ್ನೂ ಮುಂದೆಯಾದರೂ ಧರ್ಮ ಬಿಟ್ಟು ನೇರ ರಾಜಕಾರಣ ಮಾಡಲಿ ಎಂದು ಗುಡುಗಿದರು.

ಡಿಸಿಎಂ ಡಿಕೆಶಿ ಆರ್‌ಎಸ್‌ಎಸ್ ಗೀತೆ ಹಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ ಸಚಿವ ಸಿಆರ್‌ಎಸ್, ಡಿ.ಕೆ.ಶಿವಕುಮಾರ್ ಹಿಂದು. ಅದೇ ರೀತಿ ಹಿಂದುತ್ವ, ದೇವಸ್ಥಾನದ ಬಗ್ಗೆ ಬಿಜೆಪಿಯವರಿಗಿಂತ ನಮಗೆ ಹೆಚ್ಚು ಗೌರವವಿದೆ. ನಾವು ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ. ಆದರೆ ಅವರು ಹಿಂದುತ್ವದಲ್ಲಿ ರಾಜಕಾರಣ ಮಾಡುತ್ತಾರೆ. ನಾವು ಧರ್ಮ, ಸಮುದಾಯ ಇಟ್ಟುಕೊಂಡು ರಾಜಕಾರಣ ಮಾಡಲ್ಲ. ಡಿಕೆಶಿ ಬಿಜೆಪಿಗೆ ಹೋಗುವುದಾದರೇ ಯಾವಾಗಲೋ ಹೋಗುತ್ತಿದ್ದರು. ಡಿಕೆಶಿ ಕಾಂಗ್ರೆಸ್‌ನಲ್ಲಿ ಗಟ್ಟಿ ನೆಲ ಕಂಡುಕೊಂಡಿದ್ದಾರೆ. ಹೀಗಿರುವಾಗ ಡಿ.ಕೆ.ಶಿವಕುಮಾರ್ ಏಕೆ ಬಿಜೆಪಿಗೆ ಹೋಗುತ್ತಾರೆ. ಕಾಂಗ್ರೆಸ್ ಅಧ್ಯಕ್ಷರಾಗಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ನಮಗೆ ಅವರ ಬಗ್ಗೆ ಪ್ರಶಂಶೆ ಇದೆ. ಸಂದರ್ಭ ಬಂದಾಗ ಮುಖ್ಯಮಂತ್ರಿಯಾಗುತ್ತಾರೆ. ಅದನ್ನು ನಮ್ಮ ಪಕ್ಷ ಹಾಗೂ ವರಿಷ್ಠರು ತೀರ್ಮಾನ ಮಾಡುತ್ತಾರೆ. ಅದನ್ನು ಬಿಜೆಪಿ, ಮಾಧ್ಯಮದವರು ತೀರ್ಮಾನ ಮಾಡಲ್ಲ ಎಂದರು.

ಇಡಿಯಿಂದ ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಾಸಕ ವಿರೇಂದ್ರ ಪಪ್ಪಿ ಒಬ್ಬ ಉದ್ಯಮಿ. ಇವತ್ತಿನಿಂದ ಅಲ್ಪ, ಮೊದಲಿಂದಲೂ ಅವರು ಉದ್ಯಮಿ. ಈ ವಿಷಯವನ್ನು ಮುಚ್ಚಿಟ್ಟಿ ಅವರು ಶಾಸಕರಾಗಿಲ್ಲ. ಇಡಿಗೆ ಲೆಕ್ಕ ಕೊಡುತ್ತಾರೆ ಬರುತ್ತಾರೆ. ಕಾನೂನು ವಿರುದ್ದ ಇದ್ದರೇ ಕ್ರಮ ತೆಗೆದುಕೊಳ್ಳುತ್ತಾರೆ. ನ್ಯಾಯಾಲಯ ಆ ಕುರಿತು ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.