ಜಿಲ್ಲೆ

ರೈತರ ಅನುಕೂಲಕ್ಕೆ ಹಾರ್ವೆಸ್ಟ್ ಹೈಟೆಕ್ ಹಬ್ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಚಿವ ಚಲುವರಾಯ ಸ್ವಾಮಿ ಹೇಳಿಕೆ

ಸುಬ್ರಹ್ಮಣ್ಯ: ರೈತರಿಗೆ ವಿಶೇಷ ಅನುಕೂಲ ಒದಗಿಸಲು ಹಾರ್ವೆಸ್ಟ್ ಹೈಟೆಕ್ ಹಬ್ ಎಂಬ ವಿನೂತನ ಯೋಜನೆ ಜಾರಿಗೆ ತರಲಾಗಿದೆ. ಇದಕ್ಕೆ 100 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ಇದರ ಮೂಲಕ ಕಬ್ಬು, ಭತ್ತ ಇತ್ಯಾದಿ ಬೆಳೆಯುವ ರೈತರಿಗೆ ಯಂತ್ರ ಖರೀದಿಗೆ ನೆರವು ಒದಗಿಸಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ ಹೇಳಿದರು.


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರೈತರಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ರೈತರಿಗಾಗಿ ಇನ್ನಷ್ಟು ವಿಶೇಷ ಯೋಜನೆ ಶೀಘ್ರ ಜಾರಿಗೊಳಿಸಲಾಗುವುದು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರ ಆತ್ಮಹತ್ಯೆ ಪ್ರಕರಣ ಕಡಿಮೆಯಾಗಿದೆ ಎಂದರು.


ರಾಜ್ಯದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಕೊರತೆ ಇಲ್ಲ. ಕಳಪೆ ಬೀಜ ವಿತರಣೆಗೆ ಕಡಿವಾಣ ಹಾಕಲಾಗಿದೆ. ಕಲಬುರಗಿ ವ್ಯಾಪ್ತಿಯಲ್ಲಿ ರೋಗದಿಂದಾಗಿ ಬೆಳೆ ನಷ್ಟ ಉಂಟಾಗಿದ್ದಾಗ ಹಿಂದಿನ ಸರ್ಕಾರ ಪರಿಹಾರ ಘೋಷಿಸಿದ್ದರೂ ನೀಡಿರಲಿಲ್ಲ. ನಮ್ಮ ಸರ್ಕಾರ ಬಂದ ತಕ್ಷಣ ಈ ಭಾಗದ ರೈತರಿಗೆ ಬೆಳೆ ನಷ್ಟ ಪರಿಹಾರ 150 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ ಎಂದರು.


10 ಸಾವಿರ ರೂ. ಸಹಾಯಧನ
ಸಾವಯವ ಕೃಷಿ ಯೋಜನೆಯಡಿ ರೈತರಿಗೆ ಒಂದು ಹೆಕ್ಟೇರ್‌ಗೆ 10 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. 1 ಅಥವಾ 2 ಹೆಕ್ಟೇರ್ ಭೂಮಿ ಹೊಂದಿದ ರೈತರು ಈ ಯೋಜನೆ ಫಲಾನುಭವಿಗಳಾಗಿರುತ್ತಾರೆ. ರೈತರಿಗೆ 20 ಲಕ್ಷ ರೂ. ನೀಡುತ್ತಿದ್ದ ಸಾಲದ ಮೊತ್ತ 50 ಲಕ್ಷ ರೂ.ಗೆ ಏರಿಸಲಾಗಿದೆ. ಈ ಸಾಲದ ಮೇಲೆ ಶೇ.4 ಬಡ್ಡಿ ರಿಯಾಯಿತಿ ನೀಡಲಾಗಿದೆ. ರೈತರು ತೆಗೆದುಕೊಂಡ ಸಾಲದ ಮೇಲಿನ ಬಡ್ಡಿಯಲ್ಲಿ ಶೇ.4ನ್ನು ಸರ್ಕಾರ ಭರಿಸಲಿದೆ ಎಂದು ಚಲುವರಾಯ ಸ್ವಾಮಿ ಹೇಳಿದರು.