ಜಿಲ್ಲೆ

ಅಭಿವೃದ್ಧಿಗಾಗಿ ರಾಜಕಾರಣ ಬಿಟ್ಟು ಜತೆಯಾಗೋಣ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲೆಯಲ್ಲಿ ಕೂಗಾಟ, ಜೈಕಾರಕ್ಕೆ ಕಡಿಮೆ ಇಲ್ಲ. ಎಲ್ಲರಿಗೂ ಅವರದ್ದೇ ಆದ ಶಕ್ತಿ ಇದೆ. ಆದರೆ, ಎಲ್ಲಿ ಜೈಕಾರ ಹಾಕಬೇಕು ಅಲ್ಲಿ ಹಾಕಿದರೆ ಗೌರವ. ಹಾಗಾಗಿ ಎಲ್ಲವನ್ನು ಬಿಟ್ಟು ಅಭಿವೃದ್ಧಿಗೆ ಜತೆಯಾಗೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಅಮೃತ್ ಭಾರತ್ ನಿಲ್ದಾಣಗಳ ಯೋಜನೆಯಡಿ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟನಾ ಸಮಾರಂಭದ ವೇಳೆ ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್, ಜೈ ನರೇಂದ್ರಮೋದಿ ಎಂಬ ಘೋಷಣೆಗಳನ್ನು ಕೂಗಿದ ಹಿನ್ನೆಲೆಯಲ್ಲಿ ಪ್ರತ್ಯುತ್ತರ ನೀಡಿದ ಸಚಿವರು, ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಪಕ್ಷದ ಸಭೆ-ಸಮಾರಂಭಗಳು ನಡೆದಾಗ ತಮ್ಮ ಪಕ್ಷದ ನಾಯಕರ ಪರ ಜೈಕಾರ ಹಾಕೋಣ. ಜಿಲ್ಲೆಯ ಅಭಿವೃದ್ಧಿಗಾಗಿ ಎಲ್ಲ ವೈಷಮ್ಯ ಹಾಗೂ ರಾಜಕಾರಣ ಬಿಟ್ಟು ಜತೆಯಾಗೋಣ ಎಂದು ಬಿಜೆಪಿ ಕಾರ್ಯಕರ್ತರಿಗೆ ತಿಳಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಾವೆಲ್ಲರೂ ಮತ ನೀಡಿದ ಮತದಾರರ ಋಣ ತೀರಿಸಲು ಕೆಲಸ ಮಾಡುತ್ತಿದ್ದೇವೆ. ನಾವೇನು ನಮ್ಮ ಮನೆಯಿಂದ ಹಣ ತಂದು ಹಾಕುತ್ತಿಲ್ಲ. ಜನರ ತೆರಿಗೆಯಿಂದ ಸಂಗ್ರಹವಾಗುವ ಹಣದಿಂದಲೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವುದು. ಆದ್ದರಿಂದ ಅಭಿವೃದ್ಧಿ ವಿಚಾರದಲ್ಲಿ ಪಕ್ಷಗಳನ್ನು ಎಳೆದು ತರುವುದು ಸರಿಯಲ್ಲ ಎಂದರು.

ದೇಶದಲ್ಲಿ ಜಿಎಸ್‌ಟಿ ಕಟ್ಟುತ್ತಿರುವುದರಲ್ಲಿ ಮಹಾರಾಷ್ಟ್ರ ಬಿಟ್ಟರೆ ನಮ್ಮ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆದ್ದರಿಂದ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಎಷ್ಟು ಅನುದಾನ ಕೊಟ್ಟರೂ ಕಡಿಮೆ. ಆದರೆ ಕೇಂದ್ರ ಸರ್ಕಾರ ಜನಸಂಖ್ಯೆ ಆಧಾರದ ಮೇಲೆ ಅನುದಾನ ಕೊಡುತ್ತಿದೆ. ಕಡಿಮೆ ಜನಸಂಖ್ಯೆಯಿದ್ದೂ ಕರ್ನಾಟಕ ಹೆಚ್ಚು ತೆರಿಗೆ ಕಟ್ಟುತ್ತಿದೆ. ಹೆಚ್ಚು ಜನಸಂಖ್ಯೆ ಇರುವ ಉತ್ತರ ಪ್ರದೇಶ ಕಡಿಮೆ ತೆರಿಗೆ ಕಟ್ಟುತ್ತಿದೆ. ಆದರೆ, ಜನಸಂಖ್ಯೆ ಆಧಾರದ ಮೇಲೆ ಉತ್ತರ ಪ್ರದೇಶಕ್ಕೆ ಹೆಚ್ಚು ಅನುದಾನ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ನಿಯಮಗಳು ಬದಲಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮನ್ವಯತೆಯಲ್ಲಿ ಅಭಿವೃದ್ಧಿ ಆಗಬೇಕು ಎಂದು ಹೇಳಿದರು.

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದೇವೆ. ಸರ್ಕಾರ ಯಾವುದೇ ಇರಲಿ ಮೂಲ ಸೌಲಭ್ಯ ಒದಗಿಸಿದಾಗ ಎಲ್ಲರೂ ಭಾಗಿಯಾಗುವುದು ನಮ್ಮ ಪುಣ್ಯದ ಕೆಲಸ. ಪ್ರಧಾನಿ ನರೇಂದ್ರ ಮೋದಿ ಅವರು ನಗರದ ರೈಲ್ವೆ ನಿಲ್ದಾಣದ ಅಭಿವೃದ್ಧಿಗಾಗಿ 20 ಕೋಟಿ ರೂ. ನೀಡಿದ್ದಾರೆ. ಅದಕ್ಕೆ ಮಂಡ್ಯ ಜಿಲ್ಲೆಯ ಜನರ ಪರವಾಗಿ ಆಭಾರಿಯಾಗಿರುತ್ತೇನೆ ಎಂದರು.

ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಜಿಲ್ಲೆ ಅಭಿವೃದ್ಧಿಯಾಗಬೇಕಾದರೆ ರಸ್ತೆಗಳು ಚೆನ್ನಾಗಿರಬೇಕು. ಇದನ್ನು ಮನಗಂಡು ಸಚಿವ ಎನ್.ಚಲುವರಾಯಸ್ವಾಮಿ ಅವರು 33 ಕೋಟಿ ರೂ ವೆಚ್ಚದಲ್ಲಿ ನಗರದ ಹೊರವಲಯದ ಅಮರಾವತಿ ಹೋಟೆಲ್‌ನಿಂದ ಜ್ಯೋತಿ ಇಂಟರ್‌ನ್ಯಾಷನಲ್ ಹೋಟೆಲ್‌ವರೆಗಿನ ರಸ್ತೆಯನ್ನು ಅಭಿವೃದ್ಧಿ ಮಾಡುವುದರ ಜತೆಗೆ ಮೈಷುಗರ್ ಹಾಗೂ ಪ್ರಮುಖ ವೃತ್ತಗಳನ್ನು ಹೈಟೆಕ್ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ನಗರಾಭಿವೃಧ್ಧಿ ಇಲಾಖೆಯಿಂದ 80 ಲಕ್ಷ ರೂ ವೆಚ್ಚದಲ್ಲಿ ರೈಲ್ವೆ ನಿಲ್ದಾಣದ ರಸ್ತೆ ಅಭಿವೃದ್ಧಿ ಮಾಡಲಾಗುವುದು. ಇದು ಮಂಡ್ಯ ನಗರದ ಸರ್ವಾಂಗೀಣ ಅಭಿವೃದ್ಧಿಗೆ ನಾಂದಿಯಾಗಿದೆ. ಅಲ್ಲದೆ, ನಗರದ ಎಲ್ಲ ರಸ್ತೆಗಳ ಅಭಿವೃದ್ಧಿಗೆ 40 ಕೋಟಿ ರೂಗಳಲ್ಲಿ ಟೆಂಡರ್ ಹಂತದಲ್ಲಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.

ನಗರದ ಮಹಾವೀರ ವೃತ್ತದ ರೈಲ್ವೆ ಅಂಡರ್ ಪಾಸ್‌ನ್ನು ಶೀಘ್ರ ಮುಗಿಸಲು ರೈಲ್ವೆ ಅಧಿಕಾರಿಗಳಿಗೆ ಹೇಳಿದ್ದೇನೆ. ಒಂದು ತಿಂಗಳಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಅದೇ ರೀತಿ ನಗರಸಭೆ ಎದುರಿನ ಗಾಂಧಿ ಉದ್ಯಾನವನ್ನು 1.70 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡುವ ಮೂಲಕ ಹೊಸ ಮಂಡ್ಯವನ್ನು ಕಟ್ಟುತ್ತೇವೆ ಎಂದರು.

ಸಂಸದೆ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ರೈಲ್ವೆ ಅಧಿಕಾರಿ ಪರೀಕ್ಷಿತ್ ಇತರರಿದ್ದರು.