ಜಿಲ್ಲೆ

ಪಕ್ಷೇತರ ಸಂಸದೆಗೆ ಕಾಂಗ್ರೆಸ್ ಪಕ್ಷದಿಂದ ಆಹ್ವಾನವಿದ್ಯಂತೆ: ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಏನಂದ್ರು ಗೊತ್ತಾ?

ಮಂಡ್ಯ: ತನಗೆ ಕಾಂಗ್ರೆಸ್‌ನಿಂದ ಆಹ್ವಾನವಿತ್ತೆಂದು ಪಕ್ಷೇತರ ಸಂಸದೆ ಹೇಳಿಕೊಂಡಿದ್ದಾರೆ. ಆದರೆ ನಾವಂತೂ ಅವರನ್ನು ಪಕ್ಷಕ್ಕೆ ಕರೆದಿಲ್ಲ. ಆದ್ದರಿಂದ ಯಾರು ಆಹ್ವಾನ ಕೊಟ್ಟರೆಂದು ಹೆಸರು ಹೇಳಿದರೆ ತಿಳಿದುಕೊಳ್ಳುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಬರುವ ಸಂಬಂಧ ಸಂಸದೆ ನಮ್ಮನ್ನ ಕೇಳಿಲ್ಲ, ನಾವಂತೂ ಅವರನ್ನು ಕರೆದಿಲ್ಲ. ಬಿಜೆಪಿ ಅಭ್ಯರ್ಥಿ ಆಗಲು ಬಯಸುತ್ತೇನೆಂದು ಅವರೇ ಸ್ಪಷ್ಟಪಡಿಸಿದ್ದಾರೆ. ನಾವೆಲ್ಲ ಮುಖಂಡರು ಒಗ್ಗಟ್ಟಾಗಿದ್ದೇವೆ. ಜೆಡಿಎಸ್‌ಗೆ ಮಂಡ್ಯ ಬಿಟ್ಟು ಕೊಡುವುದು ಬೇಡವೆಂದಿದ್ದಾರೆ ಎಂದರು.

ಈ ಬಾರಿ ಮಂಡ್ಯದಲ್ಲಿ ಸ್ವಾಭಿಮಾನದ ಚುನಾವಣೆ ನಡೆಯಲಿದೆ. ಮಂಡ್ಯ ನಾಟಿ ಸ್ಟೈಲ್‌ನಲ್ಲೇ ಸ್ವಾಭಿಮಾನದ ಚುನಾವಣೆ ಆಗಲಿದೆ. ಇದು ಮಂಡ್ಯ ಜನರ ಬಯಕೆ ಕೂಡ ಆಗಿದೆ. ಇನ್ನು ಕಾಂಗ್ರೆಸ್ ಅಭ್ಯರ್ಥಿಯನ್ನ ಶೀಘ್ರವಾಗಿ ಘೋಷಣೆ ಮಾಡಲಿದ್ದೇವೆ. ಹೈಕಮಾಂಡ್ ನಮ್ಮೆಲ್ಲರನ್ನು ವಿಶ್ವಾಸಕ್ಕೆ ಪಡೆದು ಅಭ್ಯರ್ಥಿ ಘೋಷಣೆ ಮಾಡುತ್ತಾರೆ ಎಂದು ತಿಳಿಸಿದರು.

ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿ, ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬರಲು ತಯಾರಾಗಿದ್ದಾರೆ. ಆದರೆ ಎಂಪಿ ಚುನಾವಣೆಗೂ ಮೊದಲೇ ತಗೊಳೋದಾ, ಆಮೇಲೆ ತಗೊಳೋದಾ ಎಂದು ಯೋಚನೆ ಮಾಡುತ್ತಿದ್ದೇವೆ. ಕೆಲವು ಹೆಸರು ಹೇಳಿದರೆ ವಿರೋಧ ಪಕ್ಷದ ನಾಯಕರಿಗೆ ಶಾಕ್ ಆಗುತ್ತದೆ. ಜೆಡಿಎಸ್ ಮತ್ತು ಬಿಜೆಪಿಯಿಂದ ಕನಿಷ್ಟ 30 ಜನ ಕಾಂಗ್ರೆಸ್‌ಗೆ ಬರಲು ತಯಾರಿದ್ದಾರೆ. ನಾವು ಅಪರೇಷನ್ ಮಾಡುತ್ತಿಲ್ಲ. ನಮ್ಮ ಸರ್ಕಾರದ ಅಭಿವೃದ್ಧಿ ಕೆಲಸ ಮೆಚ್ಚಿ ಬರುತ್ತಿದ್ದಾರೆ. ಜಗದೀಶ್ ಶೆಟ್ಟರ್ ಅವರಿಂದ ನಮಗೆ ಲಾಭನೂ ಇಲ್ಲ, ನಷ್ಟನೂ ಇಲ್ಲ. ಅವತ್ತು ಬಿಜೆಪಿಯಲ್ಲಿ ನೋವಾಗಿ ಕಾಂಗ್ರೆಸ್‌ಗೆ ಬಂದರು. ನಮ್ಮಲ್ಲಿ ಅವರು ಹಿರಿಯ ನಾಯಕರು, ಮಾಜಿ ಸಿಎಂ ಎಂದು ಚುನಾವಣೆ ಅಭ್ಯರ್ಥಿಯಾಗಿ ಮಾಡಿದರು. ಸೋತ ಮೇಲೆ ಎಂಎಲ್‌ಸಿ ಮಾಡಲಾಗಿತ್ತು. ಅದಕ್ಕಿಂತ ಇನ್ನೇನು ಹೆಚ್ಚು ಬಯಸುವುದು ಅಲ್ಲ. ನಾವೇನು ಅವರನ್ನು ಬಾಪ್ಪ ಎಂದು ಕರೆದಿರಲಿಲ್ಲ. ಅಲ್ಲಿ ನೋವಾಗಿ ಕಾಂಗ್ರೆಸ್‌ಗೆ ಬಂದಿದ್ದರು. ಈಗ ವಾಪಸ್ ಅಲ್ಲಿಗೆ ಹೋಗಿದ್ದಾರೆ. ಇದನ್ನು ಜನತೆಯ ಆದೇಶಕ್ಕೆ ಬಿಡೋಣಾ. ನಮ್ಮ ಲೀಡರ್‌ಗಳಿಂದ ಯಾವುದೇ ನೋವಿನ ಸಂಗತಿಯಾಗಿಲ್ಲ. ಆದರೂ ಏಕೆ ಬಿಜೆಪಿಗೆ ಹೋದರೂ ಎಂದು ಗೊತ್ತಿಲ್ಲ. ಲಕ್ಷ್ಮಣ್ ಸವದಿ ಬಿಜೆಪಿಗೆ ಹೋಗಲ್ಲ. ಬಿಜೆಪಿ ಅವರು ಎಲ್ಲರ ಮೇಲು ಒತ್ತಡ ಹಾಕುತ್ತಾರೆ ಎಂದು ಆರೋಪಿಸಿದರು.

ರಾಮ ಮಂದಿರ ಉದ್ಘಾಟನೆ ದಿನವೇ ಎಂಪಿ ಚುನಾವಣೆ ಮುಗಿತು ಎಂದು ಮಾಜಿ ಸಚಿವ ಪುಟ್ಟರಾಜು ಹೇಳಿಕೆಗೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಅವರೊಬ್ಬರೆ ರಾಮನ ಪೂಜೆ ಮಾಡಲ್ಲ, ನಾವು ರಾಮನ ಪೂಜೆ ಮಾಡುತ್ತೇವೆ. ಚಲುವರಾಯಸ್ವಾಮಿಯೂ ರಾಮನ ಭಕ್ತನೆ, ಅವರು ಪೂಜೆ ಮಾಡುತ್ತಾರೆ ಎಂದು ಪುಟ್ಟರಾಜಣ್ಣನಿಗೆ ಹೇಳಿ. ನಾನು ಮೇಲುಕೋಟೆಯ ಚಲುವರಾಯಸ್ವಾಮಿಯ ಹೆಸರು ಇಟ್ಟುಕೊಂಡಿರುವವನು. ನಾನು ಸಹ ಹಿಂದು, ರಾಮನನ್ನು ಪೂಜೆ ಮಾಡುತ್ತೇನೆ ಎಂದು ತಿರುಗೇಟು ನೀಡಿದರು.